

ಹೀರಾನಾಯ್ಕ ಟಿ. ಬಳ್ಳಾರಿ: ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಪೂರೈಸುತ್ತಿದ್ದ ಹಾಲಿನ ಪುಡಿ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದು, ಮಕ್ಕಳು ಕ್ಷೀರಭಾಗ್ಯ ಸಿಗದೆ ದಿನ ಕಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 1266 ಅಂಗನವಾಡಿ ಕೇಂದ್ರಗಳಿದ್ದು , 1.03 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಅವರಿಗೆ ಪ್ರತಿದಿನ ಹಾಲು ವಿತರಿಸಲಾಗುತ್ತಿತ್ತು. ಆದರೆ ಈಗ ನವೆಂಬರ್‌ನಿಂದ ನೀಡುತ್ತಿಲ್ಲ. ಇದರಿಂದಾಗಿ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರುವುದು ಕಡಿಮೆ ಆಗುತ್ತಿದೆ.
ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಲು, ಬಾಳೆಹಣ್ಣು, ಮೊಟ್ಟೆ ವಿತರಣೆ ಮಾಡಲಾಗುತ್ತದೆ. ಆದರೆ ಕಳೆದ ಎಂಟು ತಿಂಗಳಿಂದ ಹಾಲು ಸಿಗದೆ ಮಕ್ಕಳು ಪರಿತಪಿಸುತ್ತಿದ್ದಾರೆ.
ಕಳೆದ ವರ್ಷ ಜಾನುವಾರುಗಳಲ್ಲಿ ಕಂಡು ಬಂದ ಚರ್ಮಗಂಟು ರೋಗ (ಲಿಂಪಿಸ್ಕೀನ್)ದಿಂದಾಗಿ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿದ್ದ ಹಾಲಿನ ಪುಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸ್ಥಗಿತವಾಗಿರುವ ಹಾಲಿನ ಪುಡಿ ಪೂರೈಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
ಜಿಲ್ಲೆಯ 1266 ಅಂಗನವಾಡಿ ಕೇಂದ್ರಗಳ ಪೈಕಿ 268 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇವುಗಳ ಬಾಡಿಗೆ ಹಣದ ಕಳೆದ ಹತ್ತು ತಿಂಗಳಿಂದ ಸರ್ಕಾರದಿಂದ ಬಿಡುಗಡೆಯಾಗಿಲ್ಲ. 80 ಲಕ್ಷ ರೂ.ಗಿಂತ ಹೆಚ್ಚು ಬಾಡಿಗೆ ಹಣ ಬರಬೇಕಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 933 ಸ್ವಂತ ಕಟ್ಟಡಗಳಿವೆ. ಉಳಿದಂತೆ 3 ಪಂಚಾಯತ್ ಕಟ್ಟಡ, 14 ಸಮುದಾಯ ಭವನ, ಒಂದು ಮಹಿಳಾ ಮಂಡಲ, 43 ಶಾಲೆ ಕಟ್ಟಡ ಹಾಗೂ ನಾಲ್ಕು ಇತರ ಸರ್ಕಾರಿ ಕಟ್ಟಡದಲ್ಲಿ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ.
ಜತೆಗೆ ಕಳೆದ 10 ತಿಂಗಳಿಂದ ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ ಕೂಡ ಸರ್ಕಾರ ಪಾವತಿಸಿಲ್ಲ. ಜಿಲ್ಲೆಯಲ್ಲಿ ಅಂದಾಜು 50.64 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂಬ ಮಾಹಿತಿ ಇದೆ.
ಸಂಡೂರು ತಾಲೂಕಿನಾದ್ಯಂತ 274 ಅಂಗನವಾಡಿ ಕೇಂದ್ರಗಳಿಗೆ ಫ್ರಿಜ್ ವಿತರಣೆ ಮಾಡಲಾಗಿದ್ದು, ಅದರಂತೆ ಜಿಲ್ಲೆಯ ಎಲ್ಲ ಕೇಂದ್ರಗಳಿಗೂ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದರಿಂದಾಗಿ 1266 ಅಂಗನವಾಡಿ ಕೇಂದ್ರಗಳಿಗೆ ಅನುಕೂಲವಾಗಲಿದೆ. ಮೊಟ್ಟೆ, ತರಕಾರಿ ಇತರ ಉಪಯುಕ್ತ ವಸ್ತುಗಳನ್ನು ಕೆಡದಂತೆ ಫ್ರಿಜ್‌ನಲ್ಲಿ ಇಡಬಹುದಾಗಿದೆ.
1.03 ಲಕ್ಷ ಮಕ್ಕಳ ಪೈಕಿ 52,674 ಗಂಡು ಮಕ್ಕಳು, 50,435 ಹೆಣ್ಣು ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದು, ಅವರಿಗೆ ವಾರದಲ್ಲಿ ಮೂರು ದಿನ ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತದೆ. ಕೆಲವೊಮ್ಮೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರದಿದ್ದರೆ ಉಳಿದ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಫ್ರಿಜ್‌ನಲ್ಲಿ ಇಡಬಹುದು.
ಬಳ್ಳಾರಿ ಜಿಲ್ಲೆಯಲ್ಲಿರುವ ಒಟ್ಟು ಅಂಗನವಾಡಿ ಕೇಂದ್ರ ಮತ್ತು ಮಕ್ಕಳ ಅಂಕಿಅಂಶ
ತಾಲೂಕು ಅಂಗನವಾಡಿ ಮಕ್ಕಳ ಸಂಖ್ಯೆ
ಬಳ್ಳಾರಿ ನಗರ 203 18,025
ಬಳ್ಳಾರಿ ಗ್ರಾ. 389 33,615
ಸಂಡೂರು 261 21,966
ಸಿರಗುಪ್ಪ 293 21,497
ಕಂಪ್ಲಿ 120 8,006
ಬಳ್ಳಾರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿದ್ದ ಹಾಲಿನ ಪುಡಿ ಸರಬರಾಜು ಸ್ಥಗಿತಗೊಂಡಿದೆ. ಮುಂದಿನ ತಿಂಗಳಿಂದ ಎಲ್ಲ ಮಕ್ಕಳಿಗೆ ಸೌಲಭ್ಯ ಸಿಗುವ ಭರವಸೆ ಇದೆ. ಇನ್ನು ಬಾಡಿಗೆ ಕಟ್ಟಡಗಳ ಬಾಡಿಗೆ ಮತ್ತು ವಿದ್ಯುತ್ ಬಿಲ್ ಬಾಕಿ ಹಣ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ.ವಿಜಯಕುಮಾರ್ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ