ಅಂಗನವಾಡಿ ಕೇಂದ್ರಗಳು ಶಿಕ್ಷಣದ ಬುನಾದಿ

09 BIRUR 01
Published on

ಬೀರೂರು: ಅಂಗನಾಡಿ ಕೇಂದ್ರಗಳು ಬಡ ಮಕ್ಕಳ ಶೈಕ್ಷಣಿಕ ಬುನಾದಿ ಹಾಗೂ ಪೌಷ್ಟಿಕತೆ ಸರಿದೂಗಿಸುವ ಕೇಂದ್ರಗಳಾಗಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ರಾಜಾಜಿನಗರ ಬಡಾವಣೆಯಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶ ಕೊರತೆಯಾಗದಂತೆ ದ್ವಿದಳ ಧಾನ್ಯಗಳು, ಮೊಟ್ಟೆ, ಆಹಾರ ನೀಡುವ ಜತೆಗೆ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಸುವಲ್ಲಿ ನಿರತವಾಗಿವೆ ಎಂದರು.
ಕ್ಷೇತ್ರದಲ್ಲಿ 47 ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಅದಕ್ಕೆ ಪೂರಕವಾಗಿ ಕೆಆರ್‌ಐಡಿಎಲ್ ಸಂಸ್ಥೆಯೂ ಉತ್ತಮ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಪ್ರಕಾಶ್ ಮಾತನಾಡಿ, ರಾಜಾಜಿನಗರ ಬಡಾವಣೆಯ ಅಂಗನವಾಡಿ ಇಷ್ಟು ದಿನಗಳು ಪುರಸಭೆ ಮಳಿಗೆಯಲ್ಲಿ ಪಾಠ ಪ್ರವಚನ ನಡೆಯುತ್ತಿತ್ತು. ಆದರೆ ಶಾಸಕ ಕೆ.ಎಸ್.ಆನಂದ್ ಇಲಾಖೆಯ 10 ನೂತನ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ 2 ಕೋಟಿ ರೂ.ಮತ್ತು ಹಳೆ ಅಂಗನವಾಡಿಗಳ ದುರಸ್ತಿಗೆ 1.65 ಕೋಟಿ ರೂ. ಅನುದಾನ ಮಂಜೂರು ಮಾಡಿಸುವ ಮೂಲಕ ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಮೇಲ್ವಿಚಾರಕಿ ಅನಿತಾ, ಕಾಂಗ್ರೆಸ್ ಮುಖಂಡರಾದ ಮುರ್ಗಿ ಹರ್ಷ, ಪ್ರದೀಪ್, ಅನಂತ, ಪ್ರಭು, ಗಿರೀಶ್ ಅಂಗನಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net