ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಕಲ್ಪಿಸಿ, ಸರ್ಕಾರಕ್ಕೆ ಜನ ವೇದಿಕೆಯಿಂದ ಮನವಿ

ANGANAWADI PROTEST
ವಿಜಯಪುರ ಜಿಲ್ಲಾಡಳಿತಕ್ಕೆ ಜನ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಕ್ರಂ ಮಾಶ್ಯಾಳಕರ, ಹಮೀದಾ ಪಟೇಲ್, ಮುತ್ತು ಭೋವಿ ಮತ್ತಿತರರಿದ್ದಾರೆ.
Published on

ವಿಜಯಪುರ: ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನ ವೇದಿಕೆಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಂಗನವಾಡಿಗಳು ಹಾಗೂ ಅಲ್ಲಿನ ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನವೇದಿಕೆಯಿಂದ ಸಮೀಕ್ಷೆ ನಡೆಸಲಾಗಿದ್ದು, ಆ ವರದಿಯಲ್ಲಿರುವ ಪ್ರಮುಖ ಅಂಶಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಕೂಡಲೇ ಪರಿಶೀಲಿಸಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಒಟ್ಟು 105 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 104 ಕೇಂದ್ರಗಳಲ್ಲಿ ಬಳಕೆಗೆ ಯೋಗ್ಯವಾದ ಶೌಚಗೃಹಗಳಿಲ್ಲ. ಕೇವಲ 19 ಕೇಂದ್ರಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಇದೆ. ಕೇವಲ 70 ಸ್ವಂತ ಕಟ್ಟಡ ಇದ್ದ ಅಂಗನವಾಡಿ ಕೇಂದ್ರಗಳಿಗೆ ತಡೆಗೋಡೆ ವ್ಯವಸ್ಥೆ ಇದೆ. ಸುಮಾರು 148 ಕೇಂದ್ರಗಳಲ್ಲಿ ಮಕ್ಕಳಿಗೆ ಆಟವಾಡಲು ಹೊರಾಂಗಣ ವ್ಯವಸ್ಥೆ ಇಲ್ಲ. ಹೀಗಾಗಿ ಕೂಡಲೇ ಕೊರತೆಯನ್ನು ನೀಗಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೆಚ್ಚುವರಿಯಾಗಿ ಅಂಗನವಾಡಿ ಕೇಂದ್ರಗಳನ್ನು ಮಂಜೂರಿಸಬೇಕು. ಬೆಳಗ್ಗೆೆ 9 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಶಾಲಾ ಪೂರ್ವ ಶಿಕ್ಷಣ ನಡೆಸುತ್ತಿದ್ದು, ವಿಜಯಪುರ ಜಿಲ್ಲೆಯ 52 ಅಂಗನವಾಡಿಗಳು ಮಧ್ಯಾಹ್ನದವರೆಗೆ ಕಾರ್ಯ ನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರಗಳು ಮಾರ್ಗ ಸೂಚಿಯಂತೆ ಬೆಳಗೆ 9 ರಿಂದ ಸಂಜೆ 4 ರವರೆಗೆ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಚಿಲಿ-ಪಿಲಿ ಪಠ್ಯಕ್ರಮ ತರಬೇತಿ ಹೊಂದಿದ್ದು ಅಂಗನವಾಡಿ ಕೇಂದ್ರಗಳಲ್ಲಿ ಪಠ್ಯಪುಸ್ತಕಗಳ ಹಾಗೂ ವರ್ಕ್ ಪುಸ್ತಕಗಳ ಪೂರೈಕೆ ಹಾಗೂ ಬಳಕೆಯನ್ನು ಖಚಿತ ಪಡಿಸಬೇಕು. ಕೇಂದ್ರಗಳಲ್ಲಿ ಮಕ್ಕಳ ತೂಕದ ಯಂತ್ರದ ಬಳಕೆ ಕಡ್ಡಾಯಗೊಳಿಸಬೇಕು. ಮಾತೃಪೂರ್ಣ ಯೋಜನೆಯ ಮಾನದಂಡಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಹೀಗೆ ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.

ಮುಖಂಡ ಅಕ್ರಂ ಮಾಶ್ಯಾಳಕರ, ಹಮೀದಾ ಪಟೇಲ್, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಮಡಿವಾಳಪ್ಪ ಎಡ್ರಾಮಿ, ಲಕ್ಷ್ಮಿ ಮಾದರ, ಲಕ್ಷ್ಮಿ ಸನಪ, ರಮೇಶ ರಾಠೋಡ, ದೀಪಾ ರಾಠೋಡ, ಮಹಾನಂದಾ ಹೊಸಮನಿ, ಇಮಾಮ ಮುಲ್ಲಾ, ಮೋಟಾಬಾಯಿ ರಾಠೋಡ, ರಾಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಸುಮಂಗಲಾ ಬಬಲಾದ, ಶಾಂತಾಬಾಯಿ ನಾಟಿಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net