ಅಂಗನವಾಡಿ ಕೇಂದ್ರಗಳು ಮಕ್ಕಳ ಎರಡನೇ ಮನೆ

17 mdg 2
Published on

ಮೂಡಿಗೆರೆ: ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳು ಮಕ್ಕಳಿಗೆ 2ನೇ ಮನೆಯಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ತಂದೆ-ತಾಯಿಯರ ಜೊತೆ ಇಲ್ಲವೆಂಬುದು ಮಕ್ಕಳ ಅರಿವಿಗೆ ಬಾರದ ರೀತಿಯಲ್ಲಿ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡುತ್ತಾರೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಹೆಸಗಲ್ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಂಗನವಾಡಿ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 300 ಶಾಲೆ ಮತ್ತು 300 ಅಂಗನವಾಡಿ ಕೇಂದ್ರಗಳಿವೆ. ಕೆಲವೆಡೆ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿದೆ. ಇನ್ನು ಕೆಲವೆಡೆ ಬಾಡಿಗೆ ಕಟ್ಟಡ, ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಎಲ್ಲಾ ಕಡೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕು. ಈಗಾಗಲೆ ಬಹುತೇಕ ಕಡೆ ಕಟ್ಟಡ ನಿರ್ಮಿಸಲಾಗಿದೆ. ಸಜ್ಜಿತವಾದ ಕಟ್ಟಡವಿದ್ದರೆ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಪೋಷಕರಿಗೆ ಸುಲಭವಾಗುತ್ತದೆ. ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳಿಗೆ ಗುರಿ ತಲುಪುವ ಬಗ್ಗೆ ಕಲಿಸಿಕೊಡಲಾಗುತ್ತದೆ. ಆ ಮಕ್ಕಳು ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು ಕಾಲೇಜಿಗೆ ತೆರಳುವ ವೇಳೆ. ತಲುಪಬೇಕಾದ ಗುರಿಯ ವಿಭಾಗಕ್ಕೆ ಶೈಕ್ಷಣಿಕವಾಗಿ ತಲುಪುತ್ತಾರೆ. ಇದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾದ ಹುದ್ದೆ ಅಲಂಕರಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಹಾಲೂರು, ಜಿ.ಹೊಸಳ್ಳಿ, ಗುತ್ತಿಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶಾಸಕಿ ನಾಯನಾ ಮೋಟಮ್ಮ ಉದ್ಘಾಟಿಸಿದರು. ತಾಪಂ ಸಹಾಯಕ ನಿರ್ದೇಶಕ ನವೀನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶೋಭಾ, ಹೆಸಗಲ್ ಗ್ರಾಪಂ ಪಿಡಿಒ ಸೌಮ್ಯ, ಬಿಳಗುಳ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್, ಮುಖ್ಯಶಿಕ್ಷಕಿ ಚೂಡಾಮಣಿ, ಶಿಕ್ಷಕ ಕೆ.ವಿ.ಸುರೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಸಿ.ಎಚ್.ಅಹಮದ್ ಬಾವ, ಸಂಪತ್, ಮೋಯ್ದಿನ್ ಸೇಟ್, ಸುರೇಂದ್ರ ಉಗ್ಗೆಹಳ್ಳಿ, ಸುಧಾ ಮಂಜುನಾಥ್, ಪ್ರಜಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net