

ಗೋಣಿಕೊಪ್ಪಲು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಅಂಗನವಾಡಿ ಕೇಂದ್ರಗಳು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಒಂದು ಪ್ರಮುಖ ಕೇಂದ್ರಗಳಾಗಿದ್ದು, ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯು ಸಹ ಅಂಗನವಾಡಿ ಕೇಂದ್ರಗಳಿಂದಲೇ ಪ್ರಾರಂಭವಾಗುತ್ತವೆ. ಆದ್ದರಿಂದ ಮುತುವರ್ಜಿ ವಹಿಸಿ ಮಕ್ಕಳನ್ನು ಸಲಹುವ ಜವಾಬ್ದಾರಿಯು ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರದ್ದಾಗಿರುತ್ತದೆ ಎಂದರು.
ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಕೇಂದ್ರಗಳಾಗಿದ್ದು, ಮಕ್ಕಳನ್ನು ಹೆಚ್ವಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸೇರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಮಾಡು ಗ್ರಾ.ಪಂ. ಅಧ್ಯಕ್ಷೆ ದಿವ್ಯಾ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಜಾನ್ಸನ್, ವಿರಾಜಪೇಟೆ ತಾ.ಪಂ.ಇಒ ಕೆ.ಸಿ.ಅಪ್ಪಣ್ಣ, ಗ್ರಾ.ಪಂ.ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.