

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಮಳೆ ಬಂದರೆ ಸಂಪೂರ್ಣ ಜಲಾವೃತಗೊಂಡು ಶಿಥಿಲಾವ್ಯವಸ್ಥೆಯಲ್ಲಿರುವ ಹಳೇ ಕಟ್ಟಡದಲ್ಲಿ ನಿರ್ವಹಿಸುತ್ತಿರುವ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದು, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ.
ಪಟ್ಟಣದ ಹೊರವಲಯದ ಘಂಟಂವಾರಪಲ್ಲಿ ಗ್ರಾಮದ ಕುವೆಂಪು ನಗರದಲ್ಲಿರುವ ಅಂಗನವಾಡಿ ಕೇಂದ್ರವನ್ನು ಕಳೆದ 15 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಈ ಕೇಂದ್ರದಲ್ಲಿ 12 ಮಕ್ಕಳು ಕಲಿಯುತ್ತಿದ್ದಾರೆ. ಅಂಗನವಾಡಿ ಕಟ್ಟಡ ಹಳೆಯದಾಗಿದ್ದು, ಮೇಲ್ಛಾವಣಿ ಮತ್ತು ಗೋಡೆ ಶಿಥಿಲಗೊಂಡಿದೆ. ಮಳೆ ಬಂದರೆ ಕಟ್ಟಡದ ಛಾವಣಿ ಸೋರಿ ಕೊಠಡಿ ಸಂಪೂರ್ಣ ನೀರಿನಿಂದ ಜಲಾವೃತಗೊಳ್ಳುತ್ತದೆ. ಘಂಟಂವಾರಪಲ್ಲಿ ಗ್ರಾಮದ ಕುವೆಂಪು ನಗರದಲ್ಲಿರುವ ಅಂಗನವಾಡಿ ಕೇಂದ್ರ ಹೆಸರಿಗಷ್ಟೇ ಸೀಮಿತವಾಗಿದ್ದು, ಮಳೆ ಬಂದರೆ ಮಕ್ಕಳ ಆರೈಕೆ ಸೇರಿದಂತೆ ಆಟ, ಊಟ ಎಲ್ಲವೂ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿರುವ ಬಯಲು ಪ್ರದೇಶದಲ್ಲೇ ನಡೆಯುತ್ತಿದೆ.
ಅಂಗನವಾಡಿ ಕೇಂದ್ರದಲ್ಲಿ ದಾಸ್ತಾನು ಮಾಡಿರುವ ಬಾಣಂತಿಯರ, ಗರ್ಭಿಣಿಯರ ಹಾಗೂ ಮಕ್ಕಳಿಗೆ ನೀಡಬೇಕಾಗಿರುವ ಪೌಷ್ಟಿಕ ಆಹಾರ, ಹಾಲಿನ ಪುಡಿ ಎಲ್ಲವೂ ಮಳೆ ನೀರಿನ ತೇವಾಂಶದಿಂದ ಗುಣಮಟ್ಟ ಕಳೆದುಕೊಂಡು ತಿನ್ನಲು ಯೋಗ್ಯವಿಲ್ಲದಂತೆ ಆಗುತ್ತಿದೆ. ಮತ್ತೊಂದು ಕಡೆ ಅಂಗನವಾಡಿ ಕೇಂದ್ರದಲ್ಲಿ ಕಂಡು ಬರುವ ಅವ್ಯವಸ್ಥೆಗಳನ್ನು ಕಣ್ಣಾರೆ ಕಾಣುವ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಿಗಬೇಕಾಗಿರುವ ಕನಿಷ್ಠ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಕುಡಿಯಲು ಶುದ್ಧ ನೀರು, ಆಟವಾಡಲು ಸ್ಥಳವಿಲ್ಲ. ಸಿದ್ಧಪಡಿಸಿದ ಊಟ ತಿನ್ನಲು ಸಾಧ್ಯವಿಲ್ಲ, ಶೌಚಗೃಹ ಇಲ್ಲದೆ ದುಸ್ಥಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರು ಮಕ್ಕಳ ಪಾಲನೆ ಮಾಡಲು ಸಾಧ್ಯವೇ.
ನಾಗಮಣಿ, ಮಕ್ಕಳ ಪಾಲಕಿ