

ಕೊಟ್ಟೂರು: ಪಟ್ಟಣದಲ್ಲಿ ಬ್ರಿಟಿಷರ ಕಾಲದ ಪೊಲೀಸ್ ಠಾಣೆಯ ಖಾಲಿ ಜಾಗದಲ್ಲಿ ಮಾಹಿತಿ ನೀಡದೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಪೊಲೀಸ್ ಇಲಾಖೆ ತಡೆಯೊಡ್ಡಿದೆ.
ಬ್ರಿಟಿಷರ ಕಾಲದ ಈ ಠಾಣೆ ಶಿಥಿಲಗೊಂಡಿದ್ದರಿಂದ ಬೇರೆಡೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹಳೇ ಠಾಣೆಯ ಸುಮಾರು 40 ಸೆಂಟ್ಸ್ ವಿಸ್ತೀರ್ಣದ ಜಾಗ ನಾಲ್ಕೈದು ವರ್ಷಗಳಿಗಿಂತ ಖಾಲಿ ಇತ್ತು. ಅಂಗನವಾಡಿ ಕಟ್ಟಡ ನಿರ್ಮಿಣಕ್ಕೆ ಸೂಕ್ತವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಾಗ ನೀಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಅವರು ಸಹಾಯಕ ಆಯುಕ್ತರಿಗೆ ರವಾನಿಸಿದ್ದಾರೆ.
ಆದರೆ, ಅಂಗನವಾಡಿ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರ ಏಕಾಏಕಿ ಜೆಸಿಬಿ ತರಿಸಿ ಬ್ರಿಟಿಷರ ಕಾಲದ ಠಾಣೆ ಜಾಗವನ್ನು ಸ್ವಚ್ಛಗೊಳಿಸತೊಡಗಿದಾಗ ಜನರು ಪೊಲೀಸರಿಗೆ ತಿಳಿಸಿದ್ದು, ತಕ್ಷಣ ಬಂದು ತಡೆದಿದ್ದಾರೆ.
ಈ ವಿಷಯ ಡಿವೈಎಸ್ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿವರೆಗೆ ತಲುಪಿದೆ. ಇಲಾಖೆ ಗಮನಕ್ಕೆ ಬಾರದೆ ಇಷ್ಟೆಲ್ಲ ನಡೆದಿರುವ ಬಗ್ಗೆ ಎಸ್ಪಿ ಶ್ರೀಹರಿಬಾಬು ಗರಂ ಆಗಿದ್ದು, ಯಾವುದೇ ಕಾರಣಕ್ಕೂ ಜಾಗ ಕೊಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಹಳೇ ಪೊಲೀಸ್ ಠಾಣೆ ಹತ್ತಿರದಲ್ಲಿ ಮೂರು ದೇವಾಲಯ ಇರುವುದರಿಂದ ಜಾತ್ರೆ, ಕಾರ್ತೀಕೋತ್ಸವದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಭಕ್ತರ ಹಿತದೃಷ್ಟಿಯಿಂದ ಇಲ್ಲಿ ಉಪ ಪೊಲೀಸ್ ಠಾಣೆ ತೆರೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.