ಚುನಾವಣೆಗೂ ಪೂರ್ವ ಕೊಟ್ಟ ಗ್ಯಾರಂಟಿಯಂತೆ ವೇತನ ಹೆಚ್ಚಿಸಿ-ಅಂಗನವಾಡಿ, ಅಕ್ಷರ ದಾಸೋಹ ನೌಕರರ ಆಗ್ರಹ

Anganwadi, Akshara Dasoha employees strike
Published on

ಕಾರವಾರ: ಸಮಾನ ವೇತನ ನಿಗದಿಪಡಿಸಬೇಕು, ಕೇಂದ್ರ ಸರ್ಕಾರದ ಯೋಜನೆಗಳ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಯೋಜಿತ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಾಲಾದೇವಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಕುಳಿತರು. ಕೇಂದ್ರ ಸರ್ಕಾರದ ವಿರುದ್ಧ, ಸಂಸದರ ವಿರುದ್ಧ ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ಸಿಐಟಿಯು ಕರೆ ನೀಡಿದ ಸಂಸದರ ಕಚೇರಿ ಚಲೋ ಭಾಗವಾಗಿ ಎಲ್ಲ ಜಿಲ್ಲೆಗಳಲ್ಲೂ ಚಳುವಳಿ ನಡೆದಿದ್ದು, ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಮಹಿಳೆಯರು ಅಹೋ ರಾತ್ರಿ ಧರಣಿ ಮುಂದುವರಿಸಿದ್ದಾರೆ.
ಕೇಂದ್ರ ಸರ್ಕಾರ ಮಕ್ಕಳು ಮತ್ತು ಮಹಿಳೆಯರ ರಕ್ಷಣೆ, ಪೋಶಣೆಗೆ ನೀಡಬೇಕಾದ ತನ್ನ ಪಾಲಿನಲ್ಲಿ ಶೇ. 60 ನ್ನೂ ಕಡಿತ ಮಾಡಿದೆ. 2021 ರ ಬಜೆಟ್‌ನಲ್ಲಿ 1900 ಕೋಟಿ ರೂ.ಗಳನ್ನು ಈ ವಿಭಾಗಕ್ಕೆ ಕಡಿತ ಮಾಡಲಾಗಿದ್ದು, ಇದರಿಂದ 11.80 ಕೋಟಿ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಐಸಿಡಿಎಸ್, ಎಂಡಿಎ, ಎನ್‌ಎಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ, ಎನ್‌ಆರ್‌ಇಜಿಎ ಮುಂತಾದ ಯೋಜನೆಗಳನ್ನು ಕಾಯಂ ಮಾಡುವ ಮೂಲಕ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ದುಡಿಯುವ ವರ್ಗಗಳ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕೊಡಬೇಕು. ಅಕ್ಷರ ದಾಸೋಹದ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಎಂದು ಏರಿಸಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಇಡಿಗಂಟು ನೀಡಬೇಕು. ವಿದ್ಯುತ್ ರೈಲ್ವೆ ಸೇರಿದಂತೆ ವಲಯಗಳ ಖಾಸಗೀಕರಣ ನಿಲ್ಲಬೇಕು ಎಂಬುದು ಸೇರಿ 13 ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಬಳಿ ಇಡಲಾಗಿದೆ.
ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ ನೀಡಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಘೋಷಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 15 ಸಾವಿರಕ್ಕೆ ವೇತನ ಹೆಚ್ಚಿಸಬೇಕು. ಬಿಸಿಯೂಟ ನೌಕರರ ವೇತನವನ್ನು 6 ಸಾವಿರಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಗೆ 3, ಸಹಾಕಿಗೆ 2 ಲಕ್ಷ ರೂ. ನಿವೃತ್ತಿ ಸೌಲಭ್ಯ ನೀಡಬೇಕು. ಬಿಸಿಯೂಟ ಸಾದಿಲ್ವಾರು ವೆಚ್ಚವನ್ನು ಎಸ್‌ಡಿಎಂಸಿಗೆ ವರ್ಗಾವಣೆ ಮಾಡುವ ಕ್ರಮ ಬಿಡಬೇಕು ಎಂದು ಒತ್ತಾಯಿಸಲಾಗಿದೆ.
ಯಮುನಾ ಗಾಂವಕರ್, ತಿಕಲ ಗೌಡ, ನಾಗಪ್ಪ ನಾಯ್ಕ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಗಂಗಾ ನಾಯ್ಕ, ಅಂಗನವಾಡಿ ನೌಕರರ ಸಂಘದ ಜಯಶ್ರೀ ಹಿರೇಕರ್, ಲಲಿತಾ ಹೆಗಡೆ, ವಿದ್ಯಾ ವೈದ್ಯ, ಸೀತಾ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net