

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಮಕ್ಕಳ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಬುನಾದಿ ಎನಿಸಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರು (ಕಟ್ಟಡ) ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೇಶನಗಳ ತಲಾಶ್ ಆರಂಭಿಸಿದೆ.
ಜಿಲ್ಲೆಯಲ್ಲಿ 1,277 ಅಂಗನವಾಡಿ ಕೇಂದ್ರಗಳಿದ್ದು 984 ಸ್ವಂತ ಕಟ್ಟಡಗಳಲ್ಲಿ, 4 ಅಂಗನವಾಡಿಗಳು ಪಂಚಾಯಿತಿ ಕಟ್ಟಡಗಳಲ್ಲಿ, 58 ಸಮುದಾಯ ಭವನದಲ್ಲಿ, 85 ಅಂಗನವಾಡಿಗಳು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ 146 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿವೆ. ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ನಿವೇಶನಗಳ ಹುಡುಕಾಟ ನಡೆಯುತ್ತಿದೆ. ಪ್ರಸ್ತುತ 121 ನಿವೇಶನಗಳ ಅಗತ್ಯವಿದ್ದು, ಇದಕ್ಕಾಗಿ ಆಯಾ ತಾಲೂಕುಗಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರ ಪಟ್ಟಣ ಪ್ರದೇಶಗಳಲ್ಲಿ ಆಯುಕ್ತರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪತ್ರ ಬರೆದಿದ್ದು ನಿವೇಶನ ಗುರುತಿಸಿಕೊಡುವಂತೆ ಮನವಿ ಮಾಡಿದೆ.
ಅನುದಾನದ ನಿರೀಕ್ಷೆ:
ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 54 ನಿವೇಶನಗಳನ್ನು ಕಾಯ್ದಿರಿಸಲಾಗಿದ್ದು, ಈ ನಿವೇಶನಗಳಲ್ಲಿ ಸ್ವಂತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಇಲಾಖೆ ರೂಪುರೇಷೆ ಸಿದ್ಧ ಪಡಿಸುತ್ತಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗದಿರುವುದರಿಂದ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನ ಸೆಳೆದಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಹೊಸಕೋಟೆಯಲ್ಲಿ 15, ನೆಲಮಂಗಲ 18, ದೇವನಹಳ್ಳಿ 16 ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ನಿವೇಶನ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯಕ್ಕೆ ಪರದಾಟ:
ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದು ಇಲಾಖೆಗೂ ತಲೆನೋವಾಗಿದೆ. ಸ್ವಂತ ಕಟ್ಟಡವಾದರೆ ಎಲ್ಲ ಸೌಲಭ್ಯ ಕಲ್ಪಿಸಬಹುದು. ಜತೆಗೆ ನಿರ್ವಹಣೆಯೂ ಸುಲಭ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಬಾಡಿಗೆ ಕಟ್ಟಡಗಳಲ್ಲಿ ಸರಿಯಾದ ಗಾಳಿ ಬೆಳಕಿನ ಸೌಲಭ್ಯಗಳಿಲ್ಲ ಎಂಬ ಆರೋಪ ದಟ್ಟವಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಶತಾಯಗತಾಯ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಕಸರತ್ತು ನಡೆಸುತ್ತಿದೆ. ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಬಹುತೇಕ ಮಕ್ಕಳು ಅಂಗನವಾಡಿ ಮೂಲಕವೇ ಪ್ರವೇಶ ಪಡೆಯುತ್ತವೆ, ಈ ಹಿನ್ನೆಲೆಯಲ್ಲಿ ಸರ್ಕಾರ ಅಂಗನವಾಡಿಗಳಿಗೆ ಪ್ರಾಧಾನ್ಯತೆ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಬಾಡಿಗೆ ಕಟ್ಟಡಗಳಲ್ಲಿನ ಪುಟ್ಟ ಕೊಠಡಿಯಲ್ಲಿ ಮಕ್ಕಳನ್ನು ಕೂಡಿಹಾಕಿದಂತಹ ಅನುಭವ ಕಂಡುಬರುತ್ತಿದೆ. ಆಟದೊಂದಿಗೆ ಅಕ್ಷರಜ್ಞಾನ ಕಲಿಯಬೇಕಾದ ಪುಟ್ಟ ಮಕ್ಕಳಿಗೆ ಪೂರಕ ವಾತಾವರಣವಿಲ್ಲ ಎಂಬುದು ಬಹುತೇಕ ಪಾಲಕರ ಆರೋಪವಾಗಿದೆ. ಬಹುತೇಕ ಅಂಗನವಾಡಿಗಳಿಗೆ ಸುಸಜ್ಜಿತ ಕೊಠಡಿಗಳೇ ಇಲ್ಲ, ನಿತ್ಯ ಮಕ್ಕಳ ಕಲಿಕೆಗೆ ಮಾತ್ರವಲ್ಲದೆ ಗರ್ಭಿಣಿ, ಬಾಣಂತಿಯರ ಪೌಷ್ಟಿಕ ಊಟೋಪಚಾರಗಳಿಗೂ ಸಮಸ್ಯೆಯುಂಟಾಗುತ್ತಿವೆ ಎಂಬ ಆರೋಪ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆಲ್ಲ ಪರಿಹಾರವಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ಇಲಾಖೆಯ ಉದ್ದೇಶವಾಗಿದೆ.
ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿವೇಶನಗಳ ಗುರುತಿಸುವಿಕೆಗೆ ಸಂಬಂಧಪಟ್ಟಂತೆ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಶೌಚಗೃಹ ವಿದ್ಯುತ್ ಸಂಪರ್ಕ, ಫ್ಯಾನ್, ನೀರು ಸೇರಿ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ನಿಗಾವಹಿಸಲು ಸೂಚನೆ ನೀಡಲಾಗಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ
ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಬಹುತೇಕ ಮಕ್ಕಳು ಅಂಗನವಾಡಿ ಮೂಲಕವೇ ಪ್ರವೇಶ ಪಡೆಯುತ್ತವೆ, ಈ ನಿಟ್ಟಿನಲ್ಲಿ ಅಂಗವಾಡಿಗಳಲ್ಲಿ ಮೂಲಸೌಕರ್ಯದೊಂದಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಗಳ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಕಾಯ್ದಿರಿಸುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಕ್ರಿಯೆ ನಡೆಯಲಿದೆ.
ನಟರಾಜ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ