

ತುಮಕೂರು : ಕರೊನಾ ಆತಂಕದಿಂದ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿ ಸೋಮವಾರ ಆರಂಭವಾಗಿದ್ದು, ಪುಟಾಣಿ ಮಕ್ಕಳು ಖುಷಿಯಿಂದಲೇ ಆಗಮಿಸಿದರು, ಬಹುದಿನದ ನಂತರ ಪಾಲಕರು ಮಕ್ಕಳನ್ನು ಕರೆತಂದು ಬಿಟ್ಟರು.
ಸೋಮವಾರ ಬೆಳಗ್ಗೆ 10ಕ್ಕೆ ಚಿಣ್ಣರು ಅಂಗನವಾಡಿ ಮತ್ತು ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಶಾಲಾ ಬ್ಯಾಗ್ ಧರಿಸಿ, ಪೋಷಕರೊಂದಿಗೆ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳನ್ನು ತರಗತಿಗಳಿಗೆ ಬರ ಮಾಡಿಕೊಳ್ಳಲು ಸಕಲಸಿದ್ಧತೆ ಮಾಡಿಕೊಂಡಿದ್ದ ಶಾಲೆಗಳು ಇಂದು ಬೆಳಗ್ಗೆ ಮಕ್ಕಳಿಗೆ ಸಂತಸ, ಸಂಭ್ರಮದಿಂದ ತರಗತಿಗಳಿಗೆ ಸ್ವಾಗತಿಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳು ತಮ್ಮ ಪಾಲಕರೊಂದಿಗೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.
ಎಂಪ್ರೆಸ್ ಬಾಲಕಿಯರ ಪಿಯು ಕಾಲೇಜು ಪ್ರಾಚಾರ್ಯ ಷಣ್ಮುಖ ಮಾತನಾಡಿ, ಪ್ರಸ್ತುತ ಈ ವರ್ಷದಲ್ಲಿ ಎಲ್‌ಕೆಜಿಗೆ 30 ಮಂದಿ ಯುಕೆಜಿಗೆ 30 ಮಂದಿ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ 30+30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಿ ಎಂದು ಬಿಇಒ ಕಚೇರಿಯ ನಿರ್ದೇಶನದ ಮೇರೆಗೆ ಈಗ ಅರ್ಜಿ ತೆಗೆದುಕೊಂಡು ದಾಖಲಾತಿ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಎಂಪ್ರೆಸ್ ಕೆಪಿಎಸ್ ಶಾಲೆಯ ಯುಕೆಜಿ ತರಗತಿ ಶಿಕ್ಷಕಿ ಆಶಾ ಮಾತನಾಡಿ, ಶಾಲೆಯ ಆರಂಭದ ಮೊದಲ ದಿನವಾಗಿದ್ದು, ಪಾಲಕರೊಂದಿಗೆ ಮಕ್ಕಳು ಶಾಲೆಗೆ ಬಂದಿದ್ದು, ಪಾಲಕರ ಅನುಮತಿ ಪತ್ರ ಪಡೆದು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಇನ್ನೊಂದು ವಾರ ಮಕ್ಕಳಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಿ, ಮಕ್ಕಳು ಸಿದ್ಧವಾದ ನಂತರ ಮುಂದಿನ ವಾರದಿಂದ ಮಕ್ಕಳಿಗೆ ಶಿಕ್ಷಣ ಕಲಿಸಲಾಗುವುದು ಎಂದರು.