ಮೊರಬದಲ್ಲಿ ನೂತನ ನಂದಘರ್ ಉದ್ಘಾಟನೆ

h8-Nandaghar newwww
Published on

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮೊದಲ ಹಂತವಾಗಿ 56 ಅಂಗನವಾಡಿ ಕೇಂದ್ರಗಳನ್ನು ನಂದಘರ್ ಯೋಜನೆಯಡಿ ನಿರ್ವಿುಸಿದ್ದು, ಗುರುವಾರದಂದು ನವಲಗುಂದ ತಾಲೂಕಿನ ಮೊರಬದಲ್ಲಿ ನೂತನ ಅಂಗನವಾಡಿ ಕೇಂದ್ರ ‘ನಂದಘರ್’ವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

ವೇದಾಂತ ಕಂಪನಿಯ ಸಿಎಸ್​ಆರ್ ಅನುದಾನದಡಿ ಅಂಗನವಾಡಿ ಕೇಂದ್ರಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ. 50 ಅಂಗನವಾಡಿಗಳನ್ನು ನಂದಘರ್ ಆಗಿ ಪರಿವರ್ತಿಸುವ ಕಾರ್ಯ ನಿರ್ಮಾಣ ಹಂತದಲ್ಲಿದೆ.

ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಕ್ರಾಂತಿಯೊಂದಿಗೆ ನಾವು ಇಟ್ಟಿರುವ ಹೆಜ್ಜೆ ಯಶಸ್ವಿಯಾಗಿದೆ, ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಪರಿವರ್ತಿಸುವ ಈ ನಂದಘರ್ ಪರಿಕಲ್ಪನೆ ತಳಮಟ್ಟದಲ್ಲಿ ತಾಯಿ ಮತ್ತು ಮಗುವಿಗೆ ಉತ್ತಮ ನಾಳೆಯನ್ನು ಸೃಷ್ಟಿಸುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ನಂದಘರ್​ನಲ್ಲಿ ಮಕ್ಕಳಿಗೆ ಆಸನಗಳ ವ್ಯವಸ್ಥೆ, ಸೌರಶಕ್ತಿಯಾಧಾರಿತ ವಿದ್ಯುತ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ವ್ಯವಸ್ಥೆ, ಸ್ವಚ್ಛ ಶೌಚಗೃಹ, ಸ್ಮಾರ್ಟ್ ಟಿವಿ ಮೂಲಕ ‘ಇ-ಕಲಿಕೆ- ವ್ಯವಸ್ಥೆ, ಆಟಿಕೆ ಸಾಮಗ್ರಿಗಳು ಹೀಗೆ ವಿವಿಧ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಆಧಾರಿತ ಕಲಿಕೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ರೈಮ್ಸ್​ಗಳನ್ನು ವಿಡಿಯೋ ಮೂಲಕ ಕಂಪ್ಯೂಟರ್​ನಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಆರಂಭಿಕ ಹಂತದಿಂದಲೇ ಮಕ್ಕಳಿಗೆ ಇ-ಕಲಿಕೆ ಪರಿಚಯ, ಜ್ಞಾನ ದೊರೆತಂತಾಗಲಿದೆ. ಮುಂದಿನ ಹಂತದಲ್ಲಿ ತಂತ್ರಜ್ಞಾನಾಧಾರಿತ ಕಲಿಕೆಗೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಯದೊಂದಿಗೆ ಈಗಾಗಲೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 96 ನಂದಘರ್ ಕಾರ್ಯಾರಂಭ ಮಾಡಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ವೇದಾಂತ ಕಂಪನಿಯ ಪ್ರಧಾನ ವ್ಯವಸ್ಥಾಪಕ ಧ್ರುವನಾರಾಯಣ ಮುಖರ್ಜಿ, ರವಿ ಬಿಸಗುಪ್ಪಿ, ರವಿ ನಾಯಕ, ಮೈತ್ರಾ ಶೆಟ್ಟಿ, ಭಾರತಿ ಕಲಾಚೆಟ್ಟಿ, ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ಜಾಲಿಹಾಳ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮೊರಬ ಗ್ರಾಮದ ಹಿರಿಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net