

ತುಮಕೂರು: ಭವಿಷ್ಯ ನಿಧಿ, ಸುಪ್ರೀಂಕೋರ್ಟ್ ಆದೇಶ ಪಾಲನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಬಿಜಿಎಸ್ ವೃತ್ತದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೂರಾರು ಕಾರ್ಯಕರ್ತರು, ಗಾಜಿನ ಮನೆಯಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಮಲಮ್ಮ ಮಾತನಾಡಿ, ಶಾಲಾ ಪೂರ್ವ ಶಿಕ್ಷಣದೊಂದಿಗೆ ಮಕ್ಕಳು, ಗರ್ಭೀಣಿಯರು, ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಅತ್ಯಲ್ಪ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದಾರೆ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಭವಿಷ್ಯ ನಿಧಿ ಸೇರಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂಗನವಾಡಿ ನೌಕರರು ನಿವೃತ್ತರಾದರೆ ಇಡಗಂಟು ನೀಡುವ ಯೋಜನೆ ಪ್ರಾರಂಭಿಸಲಾಗಿದ್ದು, ಈಗಿನ ಸರ್ಕಾರ ಇಡಗಂಟು ನೀಡುವುದಕ್ಕೆ ಅನುದಾನದ ಕೊರತೆ ಎನ್ನುತ್ತಿದೆ. ಸಮಾನಾಂತರ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರು ಸಹ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಎಂದರು. ಕುಣಿಗಲ್‌ನಿಂದ ಶಾಂತಕುಮಾರಿ, ಗೀತಾ, ಗಂಗಾ, ಪ್ರೇಮ, ಗೌರಮ್ಮ, ಶೃತಿ, ವಸಂತ, ಆಶಾ, ಅನಸೂಯ ಬಿ.ಎಸ್. ಶ್ವೇತಾ, ಜಬೀನಾ, ವಿನೋದಾ, ಪುಷ್ಪಾ, ಶಂಕುತಲಾ, ವನಜಾಕ್ಷಿ, ಶಾಂತಮ್ಮ, ಶಿಲಾ, ಅನ್ನಪೂರ್ಣಾ ಇದ್ದರು.
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಟಿಜಿಟಿ ಮಳೆ ಅಡ್ಡಿಯಾಯಿತು. ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆಯಿಂದ ಕದಲದೆ ಕೊಡೆಗಳ ಸಹಾಯ ಪಡೆದರು. ಇನ್ನೂ ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಸ್ವೀಕರಿಸಿದ ನಂತರ ಸಮೀಪದ ಗಾಜಿನಮನೆಯಲ್ಲಿ ಸಮಾವೇಶಗೊಂಡು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಸಭೆ ನಡೆಸಿದರು.
ಅನುದಾನ ಕಲ್ಪಿಸದ ಸರ್ಕಾರ: ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತದೆಯೇ ಹೊರತು, ಅದಕ್ಕೆ ಅಗತ್ಯ ಅನುದಾನ ಕಲ್ಪಿಸುವುದಿಲ್ಲ, ಅಂಗನವಾಡಿ ನೌಕರರಿಗೆ ಮೊಬೈಲ್ ನೀಡಿರುವ ಸರ್ಕಾರ, ಕರೆನ್ಸಿ ಹಾಕಲು ಹಣವಿಲ್ಲ ಎನ್ನುತ್ತದೆ. ಅಪೌಷ್ಠಿಕತೆ ನಿರ್ಮೂಲನೆಗೆ ಮೊಟ್ಟೆ ನೀಡುವುದಾಗಿ ಘೋಷಿಸುವ ಸರ್ಕಾರ ಅದಕ್ಕೆ ಅನುದಾನ ನೀಡುವುದಿಲ್ಲ, ಅಂಗನವಾಡಿ ನೌಕರರು ಸಾಲಗಾರರಾಗಿದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಅಸಮಾಧಾನ ವ್ಯಕ್ತಪಡಿಸಿದರು. ಕರೊನಾ ಸಂದರ್ಭದಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸಿರುವ ಅಂಗನವಾಡಿ ನೌಕರರು ಇಂದಿಗೂ ಕಷ್ಟದಲ್ಲಿಯೇ ಜೀವನ ನಡೆಸಬೇಕಾದ ಸ್ಥಿತಿ ಇದೆ, ಕೇಂದ್ರ ಸರ್ಕಾರ ನೀಡುವ 4500 ಗೌರವಧನದ ಜತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಪಡೆದುಕೊಳ್ಳಲು ನಿರಂತರ ಹೋರಾಟ ಮಾಡಬೇಕಾಗಿದೆ ಎಂದರು. ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಯ ಶೇ.40 ಅನುದಾನವನ್ನು ಕಡಿತ ಮಾಡಿದೆ ಇದರಿಂದಾಗಿ ಅಂಗನವಾಡಿ ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದರು. ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.26ರಿಂದ ಪಾರ್ಲಿಮೆಂಟ್ ಎದುರು ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿಯೇ ಲೋಕಸಭಾ ಸದಸ್ಯರ ಕಚೇರಿ ಇರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ ಎಂದರು.
ಸುಪ್ರೀಂಕೋರ್ಟ್ ತೀರ್ಫು ಪಾಲಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡಬೇಕು, ಎನ್‌ಪಿಎಸ್ ಬದಲಿಗೆ ನಿಗದಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಅಂಗನವಾಡಿ ನೌಕರರನ್ನು ಅರೆಕಾಲಿಕ ಉದ್ಯೋಗಿಗಳು ಎನ್ನುವ ವ್ಯಾಖ್ಯಾನ ಸುಪ್ರೀಂಕೋರ್ಟ್ ಅಲ್ಲಗಳೆದಿದ್ದು, ಕನಿಷ್ಠ 26 ಸಾವಿರ ರೂ. ವೇತನ ನೀಡಬೇಕು.
- ಕಮಲಮ್ಮ, ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ