ಅಂಗನವಾಡಿಗಳಲ್ಲಿ ಸ್ಥಳೀಯ ಚಿಕ್ಕಿ ವಿತರಣೆಗೆ ಕ್ರಮ

UDP-29-TP
Published on

ಉಡುಪಿ: ಅಂಗನವಾಡಿಯಲ್ಲಿ ಪೂರೈಕೆಯಾಗುವ ಆಹಾರಗಳನ್ನು ಆಗಾಗ್ಗೆ ತಪಾಸಣೆ ನಡೆಸಿ ವರದಿ ನೀಡಬೇಕು. ಸ್ಥಳೀಯವಾಗಿ ಉತ್ಪಾದಿಸುವ ಚಿಕ್ಕಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ತಾಪಂ ಆಡಳಿತಾಧಿಕಾರಿ ಬಾಬು ಎಂ ಸೂಚಿಸಿದರು.

ಶುಕ್ರವಾರ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಸಹಾಯ ಸಂಘದ ಮಹಿಳೆಯರು ಪಡುಬಿದ್ರಿಯಲ್ಲಿ ಈಗಾಗಲೇ ಚುಕ್ಕಿ ಘಟಕ ನಡೆಸುತ್ತಿದ್ದಾರೆ. 80 ಬಡಗಬೆಟ್ಟುವಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಚಿಕ್ಕಿ ಘಟಕ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ದೊಡ್ಡ ಪ್ರಮಾಣದಲ್ಲಿ ಚಿಕ್ಕಿ ತಯಾರಿಸಲಾಗುತ್ತಿದ್ದು, ಅಂಗನವಾಡಿಗಳಲ್ಲಿ ವಿತರಣೆಗಾಗಿ ಖರೀದಿ ಮಾಡಿದರೆ ಮಾರುಕಟ್ಟೆ ಸುಲಭವಾಗಲಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕಿ ವೀಣಾ ವಿವೇಕಾನಂದ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಶನಿವಾರ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಮಾನವ ಕಳ್ಳಸಾಗಾಟ ತಡೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉಡುಪಿ ಹಳೆ ಜಿಪಂ ಕಟ್ಟಡದಲ್ಲಿ ಸಾಂತ್ವನ ಕೇಂದ್ರ ಮತ್ತೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ 8613 ಮಕ್ಕಳು ಶಾಲೆಗೆ ಸೇರಿದ್ದಾರೆ. 13 ಮಕ್ಕಳು ಶಾಲೆಯಿಂದ ಹೊರಗಿದ್ದು, ಇವರಲ್ಲಿ 8 ಮಕ್ಕಳು ಉತ್ತರಕರ್ನಾಟಕಕ್ಕೆ ತೆರಳಿದವರು ವಾಪಾಸು ಬಂದಿಲ್ಲ. ಶಾಲೆಗೆ ದಾಖಲು ಮಾಡಿಕೊಳ್ಳಬೇಕು ಅಥವಾ ಅವರ ಊರಿನ ಶಾಲೆಗೆ ಟಿಸಿ ಕಳುಹಿಸಬೇಕು ಎಂಬುದಾಗಿ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ. ಕೊರಗ ಸಮುದಾಯದ 5 ಮಂದಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಅವರ ಮನವೊಲಿಸಿ ದಾಖಲಾತಿ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಹಾರ ನಿರೀಕ್ಷಕಿ ಪೂರ್ಣಿಮಾ ಮಾತನಾಡಿ, ಸದ್ಯಕ್ಕೆ ಯಾವುದೇ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸ್ವೀಕರಿಸುತ್ತಿಲ್ಲ. ಈ ಹಿಂದೆ ಅರ್ಜಿ ಸಲ್ಲಿಸಿದವರ 620 ಕಾರ್ಡ್‌ಗಳಿಗೆ ಅನುಮೋದನೆ ಲಭಿಸಿದೆ ಎಂದರು.

ನೇತ್ರಜ್ಯೋತಿ ಯೋಜನೆ
ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾತನಾಡಿ, ಕೇಂದ್ರ ಸರ್ಕಾರದ ನೇತ್ರಜ್ಯೋತಿ ಯೋಜನೆಯಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಪೊರೆ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಕನ್ನಡ ವಿತರಿಸಲಾಗುವುದು ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕಿ ವಿಜಯಾ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ತೋಮಸ್ ಬಾಂಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net