ಅಂಗನವಾಡಿ ಸ್ವಂತ ಕಟ್ಟಡಗಳಿಗೆ ತಲಾಶ್

images
anganavadi
Published on

ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು

ಖಾಸಗಿ ಪ್ಲೇಹೋಂಗಳ ಸವಾಲು


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪುಟಾಣಿಗಳ ಶಾಲಾ ಪೂರ್ವಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿರುವ ಅಂಗನವಾಡಿ ಕೇಂದ್ರಗಳು ಖಾಸಗಿ ಪ್ಲೇಹೋಂಗಳ ಆರ್ಭಟದ ಸವಾಲಿನ ನಡುವೆ ಕಾರ್ಯನಿರ್ವಹಿಸುವ ಅನಿವಾರ್ಯತೆ ಒಂದೆಡೆಯಾದರೆ ಸ್ವಂತ ಕಟ್ಟಡಗಳಿಲ್ಲದಿರುವುದು ಮತ್ತೊಂದು ಸವಾಲಿನ ಕೆಲಸವಾಗಿದೆ. ಬಹಳಷ್ಟು ಕಡೆ ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಖಾಸಗಿ ಎದುರು ಸೆಣಸುವುದು ಮತ್ತೊಂದು ಸವಾಲಿನ ಕೆಲಸವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ ನೀಡುತ್ತಿದೆ, ಖಾಸಗಿ ಸಹಭಾಗಿತ್ವದಲ್ಲಿ ಸಿಎಸ್‌ಆರ್ ಅನುದಾನದಡಿ ಬಹಳಷ್ಟು ಕಟ್ಟಡಗಳು ನಾವಿನ್ಯತೆ ಹೊಂದುತ್ತಿವೆ. ಒಂದು ಹಂತದಲ್ಲಿ ಅಂಗನವಾಡಿಗಳಲ್ಲಿ ಸುಧಾರಣೆ ಕಂಡುಬಂದಿದೆಯಾದರೂ ಸ್ವಂತ ಕಟ್ಟಡಗಳಿಲ್ಲ ಎಂಬ ಕೊರಗು ಕಾಡುತ್ತಲೇ ಇದೆ.
100 ಅಂಗವಾಡಿಗಳಿಗೆ ಬಾಡಿಗೆ: ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಅಂಗನವಾಡಿಗಳು ಈಗಲೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲಾಖೆ ಅಂಗನವಾಡಿಗಳ ನಿರ್ಮಾಣ, ನಿವೇಶನ ಹುಡುಕಾಟಕ್ಕೆ ಹರಸಾಹಸ ನಡೆಸುತ್ತಿದ್ದರೂ ನಿರೀಕ್ಷಿತ ಲಿತಾಂಶ ಸಿಗುತ್ತಿಲ್ಲ. ಬಹಳಷ್ಟು ಕಡೆ ನಿವೇಶನ ಗುರುತಿಸುವುದೇ ದೊಡ್ಡ ಸವಾಲಾಗಿದೆ. ನಿವೇಶನ ದೊರೆಯದೆ ಸ್ವಂತ ಕಟ್ಟಡ ಕನಸಿನ ಮಾತಾಗಲಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳ ಅಳಿವು ಉಳಿವು ಇಲಾಖೆಗೂ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಮೂಲಸೌಕರ್ಯ ಕೊರತೆ: ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಮೂಲಸೌಕರ್ಯಕ್ಕೆ ಕೊರತೆ ಇಲ್ಲ. ಪುಟ್ಟ ಮಕ್ಕಳಿಗೆ ಅಗತ್ಯವಿರುವ ಗಾಳಿ ಬೆಳಕಿಗೆ ಅವಕಾಶವಿದೆ, ಕುಡಿಯಲು ಶುದ್ಧ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯಗಳಿವೆ,. ಆದರೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಬಹುತೇಕ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಅಂಗನವಾಡಿಗಳ ಸುತ್ತಮುತ್ತಲ ಪರಿಸರ ಸೇರಿ, ಅನೇಕ ಕಿರಿಕಿರಿ ಎದುರಿಸಬೇಕಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಅಂಗನವಾಡಿಗಳ ಬೇಡಿಕೆ ಕುಸಿಯುತ್ತಿದೆ. ಅಂಗನವಾಡಿಗಳಲ್ಲಿನ ಕಲಿಕಾ ಮಟ್ಟದ ಕೊರತೆ. ಅಂಗನವಾಡಿ ಶಿಕ್ಷಕಿಯರಿಗೆ ನೀಡಲಾಗುವ ಇತರೆ ಕೆಲಸಗಳು ಸೇರಿ ಮೂಲ ಸೌಕರ್ಯಗಳ ಕೊರತೆ ಕೂಡ ಕಾಡುತ್ತಲೇ ಇದೆ. ಇದರ ನಡುವೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ಪ್ಲೇಹೋಂಗಳು ಅಂಗನವಾಡಿಗಳಿಗೆ ಅಳಿವು ಉಳಿವಿನ ಸವಾಲೊಡ್ಡುತ್ತಿವೆ.
ದಾಖಲಾತಿ ಹೆಚ್ಚಳಕ್ಕೆ ಕಸರತ್ತು: ಖಾಸಗಿಯತ್ತ ಮುಖಮಾಡುತ್ತಿರುವ ಪಾಲಕರ ಮನವೊಲಿಸಿ ಅಂಗನವಾಡಿಗಳಿಗೆ ಮಕ್ಕಳನ್ನು ದಾಖಲಿಸಲು ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶದ ತಲಾಶ್ ಮುಂದುವರಿಸಿದೆ. ಆದರೂ ಬಹಳಷ್ಟು ಅಂಗನವಾಡಿಗಳು ಬಾಡಿಗೆ ಕಟ್ಟಡಗಳಿಗೆ ಸೀಮಿತವಾಗಿದೆ. ಇಂಥ ಸವಾಲಿನ ನಡುವೆ ಮಕ್ಕಳ ದಾಖಲಾತಿ ಹೆಚ್ಚಿಸುವುದು ಇಲಾಖೆಗೆ ದೊಡ್ಡ ಸವಾಲು ಎನಿಸಿದೆ.
ಅಲ್ಲಲ್ಲಿ ಅಂಗನವಾಡಿಗಳು:ಜಿಲ್ಲೆಯ 4 ತಾಲೂಕುಗಳನ್ನು ಒಳಗೊಂಡಂತೆ 1277 ಅಂಗನವಾಡಿಗಳಿವೆ. ಅದರಲ್ಲಿ 988 ಸ್ವಂತ ಕಟ್ಟಡದಲ್ಲಿದ್ದು, ಉಳಿದಂತೆ 4 ಸ್ಥಳೀಯ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇನ್ನುಳಿದಂತೆ ಸಮುದಾಯ ಭವನದಲ್ಲಿ 53, ಶಾಲೆಗಳ ಕಟ್ಟಡಗಳಲ್ಲಿ 94, ಬಾಡಿಗೆ ಕಟ್ಟಡದಲ್ಲಿ 134 ಹಾಗೂ ಪರ್ಯಾಯ ವ್ಯವಸ್ಥೆಯಲ್ಲಿ 4 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಬಾಡಿಗೆ ಕಟ್ಟಡದ ಅಂಗನವಾಡಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಕೆಲವೊಮ್ಮೆ 4 -5 ತಿಂಗಳುವರೆಗೂ ಬಾಡಿಗೆ ಪಾವತಿಯಾಗದೆ ಸಮಸ್ಯೆಯಾದ ಉದಾಹರಣೆಯಿದೆ. ಮತ್ತೊಂದಿಷ್ಟು ಕಡೆಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದೆ ಮಕ್ಕಳ ಚಟುವಟಿಕೆಗಳಿಗೆ ಸ್ಥಳಾವಕಾಶ ಸಿಗದಂತಹ ಪರಿಸ್ಥಿತಿ ಎದುರಿಸುತ್ತಿದೆ.

ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ಇಲಾಖೆಯ ಕನಸಾಗಿದೆ, ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಿವೇಶನಗಳ ಹುಡುಕಾಟ ನಡೆದಿದೆ. ಕೆಲವು ಕಡೆಗಳಲ್ಲಿ ನಿವೇಶನ ಗುರುತಿಸಿ ಪಟ್ಟಿ ತಯಾರಿಸಲಾಗಿದೆ ಇವು ಅಂತಿಮವಾಗಬೇಕಿದೆ. ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ವಹಿಸಲಾಗಿದೆ.
ಮುದ್ದಣ್ಣ. ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಬೆಂಗಳೂರು ಗ್ರಾಮಾಂತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net