

ತುಮಕೂರು ; ಕೋರಾ ಹೋಬಳಿ ಕರಿಕೆರೆಯ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದು, ಛಾವಣಿ ಕಳಚಿ ಬೀಳುತ್ತಿದೆ. ಇಲ್ಲಿನ ಸಮಸ್ಯೆ ಗಮನಕ್ಕೆ ಬಂದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ. ಇತ್ತೀಚೆಗಷ್ಟೇ ಇದೇ ಗ್ರಾಮದ ಶಾಲೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ವಿದ್ಯಾರ್ಥಿ ಮೃತಪಟ್ಟಿದ್ದ ಘಟನೆ ಹಸಿಯಾಗಿರುವ ಬೆನ್ನೆಲ್ಲೇ ಅಂಗನವಾಡಿಯಲ್ಲಿ ದುರಂತ ನಡೆಯುವ ಆತಂಕ ಶುರುವಾಗಿದೆ.
ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಮುಂಭಾಗದ ನೆರಳಿನಲ್ಲಿ ಕುಳಿತು ಮಕ್ಕಳು ಕಲಿಯುವಂತಾಗಿದೆ, ಕಳಚಿಬಿದ್ದ ಮೇಲ್ಛಾವಳಿ: ಕರಿಕೆರೆ ಅಂಗನವಾಡಿ ಕೇಂದ್ರದಲ್ಲಿ 12 ಮಕ್ಕಳಿದ್ದು, ಕಳೆದ ಶುಕ್ರವಾರ ಮೇಲ್ಛಾವಳಿ ಕಳಚಿ ಬಿದ್ದಿದೆ, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮಾಹಿತಿ ನೀಡಿದ್ದರೂ ಮೇಲಾಧಿಕಾರಿಗಳು ಉದಾಸೀನದ ಮಾತನಾಡಿರುವುದು ಸ್ಥಳೀಯರನ್ನು ಕೆರಳಿಸಿದೆ.
ಕರಿಕೆರೆ ಶಾಲೆ ಆವರಣದಲ್ಲಿರುವ ಅಂಗನವಾಡಿ ಕಟ್ಟಡ 30 ವರ್ಷದ ಹಿಂದೆ ನಿರ್ಮಾಣವಾಗಿದ್ದು, ಸಂಪೂರ್ಣ ಹಾಳಾಗಿದೆ. ಇತ್ತೀಚೆಗಷ್ಟೇ ಸರ್ಕಾರದ ಅನುದಾನದಲ್ಲಿ ರಿಪೇರಿ ಕಾರ್ಯದ ಶಾಸ್ತ್ರ ಕೂಡ ಮಾಡಲಾಗಿದೆಯಾದರೂ ಸಮಸ್ಯೆ ಬಗೆಹರಿದಿಲ್ಲ. ಎಳೆಯ ಮಕ್ಕಳು ಕಲಿಯುವ ಕೇಂದ್ರದಲ್ಲಿ ಅಪಾಯದ ಸ್ಥಿತಿಯ ಬಗ್ಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಾಗಿರುವುದು ವಿಪರ್ಯಾಸ.
1995ರಲ್ಲಿ ನಿರ್ಮಿಸಿರುವ ಕಟ್ಟಡ ಶಿಥಿಲವಾಗಿದ್ದು, ಸಹಾಯಕಿ ಬಾಗಿಲು ತೆರೆದ ಕೂಡಲೇ ಛಾವಣಿ ಪದರ ಕಳಚಿ ಬಿತ್ತು, ಅದೃಷ್ಟಕ್ಕೆ ಮಕ್ಕಳು ಇರಲಿಲ್ಲ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಮಕ್ಕಳಿಗೆ ಅಂಗನವಾಡಿ ಮುಂಭಾಗದಲ್ಲಿ ಕಲಿಸಲಾಗುತ್ತಿದೆ. ಬ್ರಮಾಂಬಿಕೆ, ಅಂಗನವಾಡಿ ಶಿಕ್ಷಕಿ ಶಾಲೆಯಲ್ಲಿ ಸಂಭವಿಸಿದ ಘಟನೆಗೆ ಇಡೀ ಗ್ರಾಮ ಇನ್ನೂ ಶೋಕದಲ್ಲಿಯೇ ಇದ್ದು, ಅನಾಹುತ ತಪ್ಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ದೂರು ನೀಡಿದರೆ ಅನಾಹುತವಾದಾಗ ನೋಡಿಕೊಳ್ಳೊಣ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಪಾಲಾಕ್ಷ ಕರಿಕೆರೆ, ಗ್ರಾಮಸ್ಥ ಕೋರಾ ಹೋಬಳಿ ಕರಿಕೆರೆ ಅಂಗನವಾಡಿ ಕೇಂದ್ರದಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ನಮ್ಮ ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ, ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುತ್ತೇನೆ. ಶ್ರೀಧರ್ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ