

ಚಿಕ್ಕನಾಯಕನಹಳ್ಳಿ : ಗರ್ಭಿಣಿ, ಬಾಣಂತಿಯರು, ಹುಟ್ಟಿದ ಮಗು, ಕಿಶೋರಿಯರ ಆರೋಗ್ಯದ ಬಗ್ಗೆ ಸದಾ ಎಚ್ಚರವಹಿಸುವ ತಾಲೂಕಿನ 90 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ನಲುಗಿವೆ.
ತಾಲೂಕಿನಲ್ಲಿ ಐದು ಹೋಬಳಿಗಳಿದ್ದು, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 369 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 279 ಅಂಗನವಾಡಿ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿದ್ದು, 90 ಕೇಂದ್ರಗಳು ಗ್ರಾಮಗಳಲ್ಲಿನ ಸಮುದಾಯ ಭವನದಲ್ಲಿ 11 , ಗ್ರಾಪಂ ಕಟ್ಟಡಗಳಲ್ಲಿ 14, ಬಾಡಿಗೆ ಕಟ್ಟಡದಲ್ಲಿ 29, ಶಾಲೆಗಳ ಕಟ್ಟಡಗಳಲ್ಲಿ 36 ಅಂಗನವಾಡಿಗಳು ನಡೆಯುತ್ತಿವೆ. ಸ್ವಂತ ಕಟ್ಟಡಗಳಿಗೆ ವಿದ್ಯುತ್, ನೀರು, ಕಾಂಪೌಂಡ್‌ಗಳ ನಿರ್ಮಾಣದ ಅವಶ್ಯಕತೆಯೂ ಇದೆ.
ಪುರಸಭೆ ವ್ಯಾಪ್ತಿಯಲ್ಲಿ 16 ಅಂಗನವಾಡಿ ಕೇಂದ್ರಗಳು ಹಾಗೂ ಹುಳಿಯಾರು ಪಪಂ ವ್ಯಾಪ್ತಿಯಲ್ಲಿ 6 ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳೇ ಇಲ್ಲದ ಸ್ಥಿತಿ ಇದ್ದು, ಇವುಗಳಿಗೆ ನಿವೇಶನ ಮಂಜೂರು ಮಾಡಿ ನಂತರದಲ್ಲಿ ಕಟ್ಟಡಗಳು ನಿರ್ಮಿಸಬೇಕಾಗಿದೆ.
ತಾಲೂಕಿನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಇರುವುದರಿಂದ ಇನ್ನಾದರೂ ಅವಶ್ಯಕತೆ ಇರುವಂತಹ ಕಟ್ಟಡಗಳಿಗೆ ಶಾಸಕರ ಸ್ಥಳೀಯಾಭಿವೃದ್ಧಿ ಯೋಜನೆಯಡಿ 13 ಕಟ್ಟಡಗಳು, ರಾಷ್ಟ್ರೀಯು ಉದ್ಯೋಗ ಖಾತರಿ ಯೋಜನೆಯಡಿ 10 ಕಟ್ಟಡಗಳು ಹಾಗೂ ಇನ್ನೂ ಹೊಸದಾಗಿ 6 ಕಟ್ಟಡಗಳಿಗೆ ಮಂಜೂರಾತಿ ಸಿಕ್ಕಿದರೂ ಉಳಿದಂತೆ 61 ಕಟ್ಟಡಗಳು ನಿರ್ಮಾಣ ಕಾರ್ಯ ಆಗುತ್ತವೆಯೇ ಕಾದು ನೋಡಬೇಕಾಗಿದೆ.
ಸರ್ಕಾರದಿಂದ 2021-22ನೇ ಸಾಲಿಗೆ 17ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಇದನ್ನು ಅಂಗನವಾಡಿಗಳ ಕಟ್ಟಡಗಳ ನಿರ್ವಹಣೆ ಹಾಗೂ ವಿದ್ಯುದೀಕರಣಕ್ಕೆ ಬಳಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿರುವ ಅಂಗನವಾಡಿಗಳಿಗೆ ಸರಿಯಾದ ಸ್ವಂತ ಕಟ್ಟಡ ನಿರ್ಮಿಸಬೇಕು. ಶೆಟ್ಟಿಕೆರೆ ಯೋಗಮಾಧವ ನಗರದ ಅಂಗನವಾಡಿಯ ಕಟ್ಟಡ ಸುಸಜ್ಜಿತವಾಗಿಲ್ಲ. ಕೂಡಲೇ ಅಧಿಕಾರಿಗಳು ಗಮನಹರಿಸಬೇಕು. ಎಚ್.ಟಿ. ಅಶೋಕ್, ಸ್ಥಳೀಯ ಶೆಟ್ಟಿಕೆರೆ ಯೋಗಮಾಧವ ನಗರ ಅಗತ್ಯವಿರುವಂತಹ ಕಟ್ಟಡಗಳನ್ನು ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲು ವರದಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ಬಿಡುಗಡೆಯಾದಂತೆ ಅವುಗಳ ನಿರ್ವಹಣೆ ಮಾಡಲಾಗುವುದು. ಹೊನ್ನಪ್ಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಅಧಿಕಾರಿ