ವಿಜೃಂಭಣೆಯಿಂದ ಜರುಗಿದ ಅಂಗಳಾಪರಮೇಶ್ವರಿ ಪ್ರತ್ಯಂಗೀರಾ ಹೋಮ

14-kkr.1(12-23
Published on

ಕಿಕ್ಕೇರಿ: ಪಟ್ಟಣದ ಆದಿಶಕ್ತಿ ಪರಾಶಕ್ತಿ ಅಂಗಳಪರಮೇಶ್ವರಿ ದೇಗುಲದಲ್ಲಿ ಇತ್ತೀಚೆಗೆ ಪ್ರತ್ಯಂಗೀರಾ ಹೋಮ ವಿಜೃಂಭಣೆಯಿಂದ ಜರುಗಿತು.

ಅರ್ಚಕ ವಿಜಯಕುಮಾರ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಹೋಬಳಿಯ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಭಕ್ತರು ಸರತಿಯ ಮೂಲಕ ಆಗಮಿಸಿ ಹೋಮಕುಂಡಕ್ಕೆ ಮೆಣಸಿನಕಾಯಿ, ಅಷ್ಟದ್ರವ್ಯಗಳನ್ನು ಅರ್ಪಿಸಿದರು.

ದೇವಿಗೆ ಪಂಚಾಮೃತಾಭಿಷೇಕ, ಗಂಗಾಜಲಾಭಿಷೇಕ ನೆರವೇರಿಸಿ, ವಿವಿಧ ಆಭರಣ, ವಸ್ತ್ರ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ದೇವಿಗೆ ಶ್ರೀನಿವಾಸ ದೇವರ ಅಲಂಕಾರ, ಮಧ್ಯರಾತ್ರಿಯಲ್ಲಿ ಉಯ್ಯಲೆ ಸೇವೆ, ಬೆಳಗಿನ ಜಾವ ದೇವಿಗೆ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರು ದೇವಿಗೆ ತುಪ್ಪದ ಆರತಿ ಬೆಳಗಿದರು. ಉಡಿ ತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಯಿತು.

ಹೋಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಅಮ್ಮನವರ ಮೆರವಣಿಗೆ ಸಾಗಿ ಅಮಾನಿಕೆರೆಯಲ್ಲಿ ಗಂಗಾಸ್ನಾನ, ಗಂಗಾಪೂಜೆ ನೆರವೇರಿಸಲಾಯಿತು. ಸುಮಂಗಲಿಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ದೇವಿಗೆ ಜೈಕಾರ ಹಾಕುತ್ತ ಭಕ್ತರು ಸಾಗಿದರು. ಕಂಕಣ ಕಟ್ಟಿಕೊಂಡ ಭಕ್ತರು ಉಪವಾಸವಿದ್ದು ದೇವಿಗೆ ಹರಕೆ ಒಪ್ಪಿಸಿದರು. ಚಂಡೆವಾದ್ಯ ಮೇಳದ ಜತೆಗೆ ಭಕ್ತರು ದೇವಿಯ ನಾಮ ಪಠಿಸುತ್ತ ನರ್ತಿಸಿದರು.

ಅಷ್ಟೋತ್ತರ ಪಠಣೆ, ಸಹಸ್ರನಾಮಾವಳಿಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಸಿಹಿ ಪೊಂಗಲ್, ತೀರ್ಥ ಪ್ರಸಾದ ವಿತರಿಸಲಾಯಿತು.
ದೇವಿಗೆ 2 ಕುರಿ ಬಲಿ ನೀಡಿ ಭಕ್ತರಿಗೆ ಭೋಜನ ನೀಡಲಾಯಿತು. ರಾತ್ರಿ ದೇವಿಗೆ ವಿಶೇಷವಾಗಿ ಒಂದು ಕುರಿ ಬಲಿ ಅರ್ಪಿಸಿ ದೇವಿಗೆ ನೈವೇದ್ಯ ಇಟ್ಟು ಕಂಕಣ ಕಟ್ಟಿಕೊಂಡ ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net