ನೆಲಮಂಗಲದಲ್ಲಿ ಅನಧಿಕೃತ ಅಂಗಡಿ ತೆರವು ಕಾರ್ಯಾಚರಣೆ, ಸ್ಥಳೀಯರಿಂದ ದೂರು ಹಿನ್ನೆಲೆಯಲ್ಲಿ ಪುರಸಭೆ ಕಾರ್ಯಾಚರಣೆ

13 Nela ph 0004 Anadikrutha Angadi Theravu
Published on

ನೆಲಮಂಗಲ: ಪಟ್ಟಣದ ಚೆನ್ನಪ್ಪ ಬಡಾವಣೆಯ ಮುಖ್ಯ ರಸ್ತೆಯಲ್ಲಿದ್ದ ಅನಧಿಕೃತ ಅಂಗಡಿಗಳನ್ನು ಗುರುವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ಖಾಸಗಿ ವಸತಿ ಬಡಾವಣೆ ಮುಂಭಾಗ ಮುಖ್ಯ ರಸ್ತೆಗೆ ಹೊಂದಿಕೊಂಡಂತ್ತಿರುವ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಅನಧಿಕೃತವಾಗಿ ವಾಹನ ಗ್ಯಾರೇಜ್, ಮಾಂಸದಂಗಡಿ ಸೇರಿ ಇತರೆ ಅಂಗಡಿ ತೆರೆದಿದ್ದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ವಾರದ ಹಿಂದೆ ಅಂಗಡಿ ಮಾಲೀಕರಿಗೆ ತೆರವುಗೊಳಿಸುವಂತೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಮುಖ್ಯಾಧಿಕಾರಿ ಜಯಪ್ಪ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ಗ್ಯಾರೇಜ್ ಹಾಗೂ ಮಾಂಸದಂಗಡಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಿದ್ದಲ್ಲದೇ ಅಂಗಡಿಗಳಿಗೆ ಬೀಗ ಹಾಕಿದರು.

ತೆರವಿಗೆ ಮುಂದಾದ ಅಧಿಕಾರಿಗಳನ್ನು ತಡೆದ ಕೆಲ ಜನಪ್ರತಿನಿಧಿಗಳು ಹಾಗೂ ಮುಖಂಡರು ತೆರವಿಗೆ ವಿರೋಧ ವ್ಯಕ್ತಪಡಿಸಿದರು.

ಪುಟ್‌ಪಾತ್ ತೆರವು: ಪಟ್ಟಣದ ಮುಖ್ಯರಸ್ತೆಯನ್ನು ಅಭಿವೃದ್ಧಿಗೊಳಿಸಿ ರಸ್ತೆಯ ಇಕ್ಕೆಲಗಳಲ್ಲಿ ಮಾಡಿದ್ದ ಪಾದಚಾರಿ ಮಾರ್ಗದಲ್ಲಿ ಎಂ.ಸ್ಯಾಂಡ್ ತುಂಬಿದ್ದ ಟ್ರ್ಯಾಕ್ಟರ್‌ಗಳು ಅತಿಕ್ರಮಣ ಪ್ರವೇಶ ಮಾಡಿಕೊಂಡಿದ್ದರಿಂದ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರ ಸಹಕಾರ ಪಡೆದ ಪುರಸಭೆ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗಳನ್ನು ತೆರವುಗೊಳಿಸಿತು.

ಪಟ್ಟಣದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಅನಧಿಕೃತ ಅಂಗಡಿ ನಿರ್ಮಾಣಕ್ಕೆ ಅವಕಾಶ ನೀಡದೇ ಖಾಲಿಜಾಗಗಳನ್ನು ರಕ್ಷಿಸುವುದು ಸೇರಿ ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡದಂತೆ ಸಾರ್ವಜನಿಕರ ಸಹಕಾರ ನೀಡಬೇಕು. ಸಂಭವಿಸಬಹುದಾದ ಅವಘಡ ತಪ್ಪಿಸಿ ವಾಹನ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಜಯಪ್ಪ ಮನವಿ ಮಾಡಿದರು.

ಹಿರಿಯ ಆರೋಗ್ಯ ನಿರೀಕ್ಷಕರಾದ ಬಸವರಾಜು, ಉಮೇಶ್, ಕಂದಾಯ ಅಧಿಕಾರಿ ಸವಿತಾ, ಕಂದಾಯ ನಿರೀಕ್ಷಕ ಸುಧಾಕರ್, ಅಭಿಯಂತರ ರವಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net