ಆನೆಯಂಬಾರಿ ಸಹಿತ ಶಿರಹಟ್ಟಿ ಶ್ರೀಗಳ ತುಲಾಭಾರ, ಅದ್ಭುತ ಕ್ಷಣ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

IMG-20240201-WA0038.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರವು ಗುರುವಾರ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಇದುವರೆಗೂ ಜಗತ್ತಿನ ಎಲ್ಲಿಯೂ ಮಾಡದೇ ಇರುವಂತಹ ಅದ್ಭುತ ಧಾರ್ಮಿಕ ಹಾಗೂ ಭಕ್ತಿಯ ಪರಾಕಾಷ್ಟೆಯ ಕಾರ್ಯಕ್ರಮವು ದಾಖಲೆ ಬರೆಯುವಂತಾಯಿತು.

ಆನೆಯಂಬಾರಿ ಉತ್ಸವ ಅಲ್ಲದೇ ಭಕ್ತಸಾಗರದ ಮಧ್ಯೆ ಜರುಗಿದ ಆನೆಅಂಬಾರಿ ಸಹಿತ ಜಗದ್ಗುರುಗಳ ತುಲಾಭಾರ ಸಮಾರಂಭವನ್ನು ಅಸಂಖ್ಯ ಭಕ್ತರು ಕಣ್ತುಂಬಿಕೊಂಡರು. ಇದೊಂದು ದಾಖಲೆಯಾಯಿತು.

ಶಿರಹಟ್ಟಿಯ ಭಾವೈಕ್ಯ ಸಂಸ್ಥಾನ ಮಹಾಪೀಠದ ಶ್ರೀಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಹರಗುರು ಚರಮೂತಿರ್ಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಭಕ್ತರು ಭಾಗವಹಿಸಿ ಸ್ಮರಣೀಯಗೊಳಿಸಿದರು.

ಹುಬ್ಬಳ್ಳಿಯ ನೆಹರು ಮೈದಾನದ ಡಾ. ಮೂಜಗಂ ವೇದಿಕೆಯಲ್ಲಿ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಅಂದು ಅಣ್ಣ ಬಸವಣ್ಣನವರು ಸಮ ಸಮಾಜದ ಪರಿಕಲ್ಪನೆ ಮಾಡಿದಂತೆ ಇಂದು ಶಿರಹಟ್ಟಿ ಪೀಠವು ಸಾಮರಸ್ಯಕ್ಕಾಗಿ ಶ್ರಮ ವಹಿಸುತ್ತಿದೆ. ಎಲ್ಲ ಜಾತಿ, ಧರ್ಮದವರ ಮಧ್ಯೆ ಭ್ರಾತೃತ್ವ ಬೆಳೆಸುವ ಕಾರ್ಯ ಮಾಡುತ್ತಿದೆ. ಮನುಷ್ಯನಲ್ಲಿ ದೇವರು ಕಾಣು, ಆಗಲೇ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂಬ ಸಂದೇಶ ಸಾರುತ್ತಿದೆ ಎಂದು ಕೊಂಡಾಡಿದರು.

ಶಿರಹಟ್ಟಿ ಪೂಜ್ಯರ ಆನೆಯಂಬಾರಿ ಸಹಿತ 5555 ಕೆಜಿ ನಾಣ್ಯಗಳಲ್ಲಿ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿದ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇದು ನಮ್ಮ ಜೀವಿತಕಾಲದ ಅದ್ಭುತ ಕಾರ್ಯಕ್ರಮ, ಶಿರಹಟ್ಟಿ ಶ್ರೀಗಳ ಮೇಲಿನ ವಿಶೇಷ ಪ್ರೀತಿ, ಭಕ್ತಿಯಿಂದ ಇದು ನಡೆಯುತ್ತಿದೆ. ಧರ್ಮಾತೀತ, ಭ್ರಾತೃತ್ವ ಬೆಳೆಸಿದ ಮಠ ಎಂದು ಬಣ್ಣಿಸಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಶಿರಹಟ್ಟಿ ಮಠಕ್ಕೂ ವಿಜಯಪುರ ಖಾಜಾ ಅಮಿನ್ ನವಾಜ್ ದರ್ಗಾಕ್ಕೂ ಅವಿನಾಭಾವ ಸಂಬಂಧ ಇದೆ. ಇದು ಭಾವೈಕ್ಯ ಸಾರುವ ಮಠ ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹಿಂದು ಮುಸ್ಲಿಂ ಭಾವೈಕ್ಯತೆಗೆ ಮಠ, ಮಾನ್ಯಗಳ ಕೊಡುಗೆ ಅಪಾರ. ಜಾತಿ, ಧರ್ಮಗಳ ಮಧ್ಯೆ ಸಾಮರಸ್ಯ ಇಲ್ಲದೇ ಅರಾಜಕತೆ ಉಂಟಾಗುತ್ತಿರುವ ಸಂದರ್ಭದಲ್ಲಿ ಸಮನ್ವಯ ಸಾಧಿಸುವುದು ಇಂದಿನ ಅಗತ್ಯ. ಆಗಲೇ ರಾಮರಾಜ್ಯವಾಗಲು ಸಾಧ್ಯ ಎಂದರು.

ಜೀವನ ದರ್ಶನ ಪುಸ್ತಕ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹುಬ್ಬಳ್ಳಿಯಲ್ಲಿ ಇಂದು ಭಕ್ತಿಯ ಪ್ರವಾಹ ಹರಿದಿದೆ. ಶುದ್ಧ ಅಂತಃಕರಣದ ಭಕ್ತಿಯಿಂದ ಭಕ್ತರು ತುಲಾಭಾರ ನೆರವೇರಿಸಿಕೊಟ್ಟಿದ್ದಾರೆ. ದೇಶದ ಧರ್ಮ, ಸಂಸತಿ ಉಳಿಸಲು ನಾವೆಲ್ಲರೂ ಒಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇತಿಹಾಸದಲ್ಲಿ ನೆನಪಿಡುವಂತಹ ಕಾರ್ಯಕ್ರಮ ಇದಾಗಿದ್ದು, ಈ ಮೂಲಕ ಭಾವೈಕ್ಯ ಮೂಡಿಸುವ ಕೆಲಸ ಆಗಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಇಂತಹ ಕಾರ್ಯಕ್ರಮ ನೋಡುವುದೇ ಭಾಗ್ಯ. ಅದ್ಭುತ ಅನುಭವ. ಶ್ರೀಗಳ ತುಲಾಭಾರ ಸಮಾರಂಭ ಕಣ್ಣಿಗೆ ಹಬ್ಬದಂತಿದೆ. ಇಂತಹ ಕಲ್ಪನೆ ಸಾಕಾರ ಮಾಡಿದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಕಾರ್ಯವೂ ಮೆಚ್ಚುವಂತದ್ದು ಎಂದು ಹೇಳಿದರು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.

ತುಲಾಭಾರ: ಶಿರಹಟ್ಟಿಯ ಶ್ರೀಕೀರ ಸಿದ್ಧರಾಮ ಸ್ವಾಮೀಜಿಯವರನ್ನು ಆನೆಯಂಬಾರಿ ಸಹಿತ 5555 ಕೆಜಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಅಂಬಾರಿ ಹೊತ್ತ ಆನೆಯು ಬೃಹತ್ ತಕ್ಕಡಿಯಲ್ಲಿ ಬಂದು ನಿಂತ ನಂತರ ಇನ್ನೊಂದು ಪರಡಿಯಲ್ಲಿ ಭಕ್ತರು ನೀಡಿದ ಸುಮಾರು 73 ಲಕ್ಷ ರೂ.ಗಳ ನಾಣ್ಯಗಳನ್ನು ಇಡುತ್ತ ಬರಲಾಯಿತು. ತಕ್ಕಡಿ ಮೇಲಕ್ಕೆ ಏಳುತ್ತಲೇ ಭಕ್ತರ ಹಷೋರ್ದ್ಘಾರ ಮುಗಿಲು ಮುಟ್ಟಿತು.

ಗ್ರಂಥ ಬಿಡುಗಡೆ: ಶ್ರೀದಿಂಗಾಲೇಶ್ವರ ಸ್ವಾಮೀಜಿಗಳು ಹತ್ತು ವರ್ಷಗಳ ಹಿಂದೆ ನೆಹರು ಮೈದಾನದಲ್ಲಿ ನಡೆಸಿಕೊಟ್ಟ ಜೀವನ ದರ್ಶನ ಪ್ರವಚನಗಳನ್ನು ಒಳಗೊಂಡ ಇಂಗ್ಲಿಷ ಹಾಗೂ ಕನ್ನಡದ ಗ್ರಂಥಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಶ್ರೀನಿವಾಸ ಮಾನೆ, ಪ್ರದಿಪ ಶೆಟ್ಟರ್, ಎಸ್.ವಿ. ಸಂಕನೂರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಲ್ಲಿಕಾರ್ಜುನ ಸಾವಕಾರ, ಹನಮಂತಪ್ಪ ದೊಡ್ಡಮನಿ, ಪ್ರಕಾಶ ಬೆಂಡಿಗೇರಿ, ಇತರರು ಪಾಲ್ಗೊಂಡಿದ್ದರು.

ಶ್ರೀಸಿದ್ಧರಾಮ ಸ್ವಾಮೀಜಿ ಸಂದೇಶ
ಹುಬ್ಬಳ್ಳಿ ಭಕ್ತರು ಪ್ರೀತಿ, ಭಕ್ತಿ ಭಾವದಿಂದ ಈ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದನ್ನು ಪ್ರೀತಿಯಿಂದ ಸ್ವೀಕಾರ ಮಾಡಿದ್ದೇನೆ. 2001ರಲ್ಲಿ ಶ್ರೀ ಫಕೀರೇಶ್ವರರು ಸಂಕಲ್ಪ ಮಾಡಿದ್ದರು. ಆನೆಯಂಬಾರಿ ಸಮೇತ ತುಲಾಭಾರವನ್ನು ಇಂದು ಶ್ರೀಫಕೀರ ದಿಂಗಾಲೇಶ್ವರರು ನೆರವೇರಿಸಿದ್ದಾರೆ. ಅವರ ಕಾರ್ಯ ಸಂತೋಷ ತಂದಿದೆ. ದ್ವೇಷದಿಂದ ನರಕ, ಪ್ರೀತಿಯಿಂದ ಸ್ವರ್ಗ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಪಲ್ಲಕ್ಕಿ ಮಹೋತ್ಸವ:
ಶ್ರೀಫಕೀರೇಶ್ವರರ ಆನೆಯಂಬಾರಿ ಹಾಗೂ ಶ್ರೀಫಕೀರ ಸಿದ್ಧರಾಮ ಸ್ವಾಮೀಜಿಗಳ ಪಲ್ಲಕ್ಕಿ ಮಹೋತ್ಸವ ಇಲ್ಲಿಯ ಮೂರುಸಾವಿರ ಮಠದಿಂದ ಮಧ್ಯಾಹ್ನ ಹೊರಟಿತು. ಐದು ಆನೆ, ಐದು ಕುದುರೆ, ಎರಡುಒಂಟೆ, ರಾಜ್ಯದ ವಿವಿಧ ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆ ಕಿತ್ತೂರ ಚನ್ನಮ್ಮ ವೃತ್ತಕ್ಕೆ ಬರುತ್ತಿದ್ದಂತೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಲಾಯಿತು. ನೆಹರು ಮೈದಾನದ ವರೆಗೆ ಮೆರವಣಿಗೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net