ಕೇಂದ್ರ ಸ್ಥಾನದಲ್ಲಿ ಇರದ ಅರವಳಿಕೆ ತಜ್ಞರು

ಬಾಸ್ಕರ್ ನಾಯಕ್
Published on

ಕುಶಾಲನಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು ಇಲ್ಲದೆ ಚಿಕಿತ್ಸೆ ಪಡೆಯುವ ಗರ್ಭಿಣಿಯರು ಭಯ ಭೀತರಾಗಿದ್ದಾರೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಆರೋಪಿಸಿದ್ದಾರೆ.

ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆಯುತ್ತಿದ್ದು, ಹೆರಿಗೆ ಆಗುವಂತ ಸಂದರ್ಭದಲ್ಲಿ ನಾರ್ಮಲ್ ಡೆಲಿವರಿ ಆದರೆ ಸಮಸ್ಯೆ ಇರುವುದಿಲ್ಲ. ಆದರೆ ಸಿಸೇರಿಯನ್ ಮೂಲಕ ಹೆರಿಗೆಯಾಗುವವರಿಗೆ ಅರವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಅರಿವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲಿ ಇಲ್ಲದೆ ಮೈಸೂರಿನಿಂದ ಬರುವ ಕಾರಣ ತೊಂದರೆಯಾಗಿದೆ. ವಾರದ ಹಿಂದೆ ಹೆರಿಗೆಗಾಗಿ ಬಂದ ಗರ್ಭಿಣಿಯೊಬ್ಬರಿಗೆ ತೀವ್ರ ರಕ್ತಸ್ರಾವವಾಗಿ ಅರಿವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಇಲ್ಲದೆ ಸುಮಾರು ಎರಡೂವರೆ ಗಂಟೆಗಳ ಕಾಲ ಕಾದು, ನಂತರ ಖಾಸಗಿ ತಜ್ಞ ವೈದ್ಯರನ್ನು ಕರೆಸಿ ಅರವಳಿಕೆ ನೀಡಿ ಆಪರೇಷನ್ ಮಾಡಲಾಗಿದೆ.

ಇದರಿಂದಾಗಿ ಗರ್ಭಿಣಿಯರು ಹೆರಿಗೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಹೋಗುವಂತ ಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಹೆರಿಗೆಗಾಗಿ ಬರುವಂತ ಗರ್ಭಿಣಿಯರಿಗೆ ಆತಂಕ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಕ್ಷೇತ್ರದ ಶಾಸಕರು ಗಮನ ಹರಿಸಬೇಕು. ಸಮಸ್ಯೆಯನ್ನು ಸರಿಪಡಿಸದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆಯನ್ನು ಮಾಡುವುದಾಗಿ ಭಾಸ್ಕರ್ ನಾಯಕ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net