ಧಾರವಾಡ ಜಿಲ್ಲೆಯ 53 ಸಾವಿರ ಮಕ್ಕಳ ರಕ್ತಹೀನತೆ ಪರೀಕ್ಷೆ

Blood test in college
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ರಕ್ತಹೀನತೆಮುಕ್ತ ಪೌಷ್ಟಿಕ ಕರ್ನಾಟಕ’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. 18 ವರ್ಷದೊಳಗಿನ ಮಕ್ಕಳನ್ನು ತಪಾಸಣೆಗೊಳಪಡಿಸಲಾಗುತ್ತಿದ್ದು, ಈವರೆಗೆ ಸುಮಾರು 53,865 ಮಕ್ಕಳನ್ನು ಪರೀಕ್ಷಿಸಲಾಗಿದೆ.

ಮಕ್ಕಳಲ್ಲಿ ರಕ್ತಹೀನತೆ ಇದ್ದರೆ ದೈಹಿಕ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುವುದು. ಸುಸ್ತು, ದೌರ್ಬಲ್ಯ, ಉಸಿರಾಟದ ತೊಂದರೆ, ತೆಳು ಅಥವಾ ಹಳದಿ ಬಣ್ಣದ ಚರ್ಮ, ಅನಿಯಮಿತ ಹೃದಯ ಬಡಿತ, ತಲೆತಿರುಗುವಿಕೆ, ತಣ್ಣನೆಯ ಕೈ ಮತ್ತು ಪಾದಗಳು ಹಾಗೂ ಎದೆ ನೋವು ರಕ್ತಹೀನತೆಯ ಪ್ರಮುಖ ಲಕ್ಷಣಗಳು. ರಕ್ತಹೀನತೆ ರೋಗವನ್ನು ನಿಮೂಲನೆ ಮಾಡಲು ಮೊದಲ ಹಂತದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಾಮೂಹಿಕ ರಕ್ತಹೀನತೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ (ಆರ್​ಬಿಎಸ್​ಕೆ) ತಪಾಸಣೆಯ ಜವಾಬ್ದಾರಿ ವಹಿಸಲಾಗಿದ್ದು, ಅದಕ್ಕಾಗಿ 15 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಕಾಲೇಜುಗಳಿಗೆ ಭೇಟಿ ನೀಡಿ ಈವರೆಗೆ 53,865 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿವೆ. ಮಕ್ಕಳಲ್ಲಿ ಸೌಮ್ಯ (ಮೈಲ್ಡ್) ರಕ್ತಹೀನತೆ ಕಂಡುಬಂದರೆ ಕಬ್ಬಿಣಾಂಶಯುಕ್ತ ಪೂರಕ ಮಾತ್ರೆಗಳನ್ನು ನೀಡಲಾಗುತ್ತದೆ.

ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ. ಮಾರ್ಗದರ್ಶನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ರಕ್ತಹೀನತೆ ತಪಾಸಣೆಯನ್ನು ಹಂತಹಂತವಾಗಿ ನಡೆಸಲಿದೆ. ಮೊದಲ ಹಂತದಲ್ಲಿ ಸರ್ಕಾರಿ, ಅನುದಾನಿತ ಶಾಲೆ ಕಾಲೇಜುಗಳ ಹದಿಹರೆಯದ ಮಕ್ಕಳ ತಪಾಸಣೆ ನಡೆಸಲಾಗುತ್ತಿದೆ.

ಮಕ್ಕಳಲ್ಲಿ ಪತ್ತೆಯಾಗುವ ಅನಿಮಿಯಾ ರೋಗವನ್ನು ಸೌಮ್ಯ, ಮಧ್ಯಮ ಮತ್ತು ತೀವ್ರ ಎಂದು ಗುರುತಿಸಲಾಗುತ್ತಿದೆ. ಸೌಮ್ಯ ಲಕ್ಷಣಗಳುಳ್ಳ ಮಕ್ಕಳಿಗೆ ಕಬ್ಬಿಣಾಂಶ ಮತ್ತು ಪೂರಕಗಳನ್ನು ಪೂರೈಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯಮ (ಮಾಡೆರೇಟ್) ಲಕ್ಷಣ ಕಂಡುಬಂದರೆ ಅವರನ್ನು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡಲಾಗುತ್ತದೆ. ತೀವ್ರತೆ ಕಂಡುಬಂದರೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ನಲ್ಲಿರುವ ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರಕ್ಕೆ (ಡಿಇಐಸಿ) ಶಿಫಾರಸು ಮಾಡಲಾಗುತ್ತದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್​ಬಿಎಸ್​ಕೆ) ತಂಡಗಳು ಪ್ರತಿದಿನ ಸುಮಾರು 150 ವಿದ್ಯಾರ್ಥಿಗಳ ತಪಾಸಣೆಗೆ ಕಾಲೇಜುಗಳಿಗೆ ಭೇಟಿ ನೀಡುತ್ತಿವೆ. ತಪಾಸಣೆಗೊಳಗಾದ ಮಕ್ಕಳ ವಿವರಗಳನ್ನು ಸ್ವಾಸ್ಥ್ಯ ಕಿರಣ ವೆಬ್​ಸೈಟ್​ನಲ್ಲಿ ನಮೂದಿಸಲಾಗುತ್ತಿದೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್​ಸಿಎಚ್​ಒ) ಹಾಗೂ ನೋಡಲ್ ಅಧಿಕಾರಿ ಡಾ. ಸುಜಾತಾ ಹಸವಿಮಠ ಪ್ರತಿಕ್ರಿಯಿಸಿದರು.

ಅನಿಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಜಾರಿಗೊಳಿಸಲಾಗಿದೆ. ಮೊದಲ ಹಂತದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯು ಕಾಲೇಜುಗಳ 53 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ರಕ್ತಹೀನತೆ ಪರೀಕ್ಷೆಗೆ ಒಳಪಡಿಸಲಾಗಿದೆ. ರಕ್ತಹೀನತೆಯನ್ನು ತೊಡೆದುಹಾಕಲು ಈ ಕಾರ್ಯಕ್ರಮ ಪೂರಕ. | ಡಾ. ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net