

ಕಾರವಾರ: ಜಿಲ್ಲೆಯ ಹದಿಹರೆಯದ 220 ಹೆಣ್ಣು ಮಕ್ಕಳಲ್ಲಿ ತೀವ್ರ ರಕ್ತ ಹೀನತೆ ಹಾಗೂ 5997 ಯುವತಿಯರಲ್ಲಿ ಮಧ್ಯಮ ರಕ್ತ ಹೀನತೆ (ಅನಿಮಿಯಾ)ಇರುವುದು ಪತ್ತೆಯಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ.ಮಾಹಿತಿ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಅನಿಮಿಯಾ ಮುಕ್ತ ಮಾಡುವ ಉದ್ದೇಶದಿಂದ ಕಳೆದ ಮೇ ತಿಂಗಳಿನಿಂದ ಇದುವರೆಗೆ 13 ರಿಂದ 18 ವರ್ಷದ ಹದಿಹರೆಯದ 43,615 ಹೆಣ್ಣು ಮಕ್ಕಳ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶದ ಪರೀಕ್ಷೆ ನಡೆಸಲಾಗಿದೆ. ರಕ್ತದಲ್ಲಿ 7 ಜಿಎಂಗಿಂತ ಕಡಿಮೆ ಹಿಮೋಗ್ಲೋಬಿನ್ ಅಂಶ ಇದುವವರನ್ನು ತೀವ್ರ ರಕ್ತ ಹೀನತೆ ಎಂದು ಗುರುತಿಸಲಾಗಿದ್ದು, 7 ರಿಂದ 10 ಜಿಎಂ ಹಿಮೋಗ್ಲೋಬಿನ್ ಇದ್ದವರನ್ನು ಮಧ್ಯಮ ರಕ್ತ ಹೀನತೆ ಇದ್ದವರು ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 37,398 ಹೆಣ್ಣು ಮಕ್ಕಳ ರಕ್ತದಲ್ಲಿ 10ಎಂಜಿಗಿಂತ ಹೆಚ್ಚು ಹಿಮೋಗ್ಲೋಬಿನ್ ಇದೆ ಎಂದರು.
ಏನಿದು ಅನಿಮಿಯಾ: ದೇಹದ ರಕ್ತದಲ್ಲಿ ಕೆಂಪು ರಕ್ತ ಕಣ ಅಥವಾ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುವುದನ್ನು ಅನಿಮಿಯಾ ಎಂದು ಕರೆಯಲಾಗುತ್ತದೆ. ಇದರಿಂದ ಆಮ್ಲಜನಕವನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಲ್ಲಿ ಬೇಗ ಸುಸ್ತಾಗುವುದು, ಕಲಿಕೆಯಲ್ಲಿ ಏಕಾಗ್ರತೆ ಇಲ್ಲದೇ ಇರುವುದು, ಮಾಂಸ ಖಂಡಗಳಲ್ಲಿ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮುಂದೆ ವಯಸ್ಸಾದ ನಂತರ ಮುಟ್ಟಿನ ಸಂದರ್ಭದಲ್ಲಿ ಅಧಿಕ ರಕ್ತ ಸ್ರಾವ, ಹೆರಿಗೆಯ ಸಂದರ್ಭದಲ್ಲಿ ಅವಧಿ ಪೂರ್ವ ಪ್ರಸವ, ಮಕ್ಕಳು ಸತ್ತು ಹುಟ್ಟುವುದು, ಹುಟ್ಟಿದ ಮಕ್ಕಳ ನರಮಂಡಲದಲ್ಲಿ ಸಮಸ್ಯೆ ಮುಂತಾದ ತೊಂದರೆಗಳು ಬರುತ್ತವೆ. ಇದರಿಂದ ಮೊದಲೇ ಕಾಳಜಿ ವಹಿಸುವ ಉದ್ದೇಶದಿಂದ ತೀವ್ರ ರಕ್ತ ಹೀನತೆ ಇರುವವರಿಗೆ ಕೆಂಪು ಹಾಗೂ ಮಧ್ಯಮ ರಕ್ತ ಹೀನತೆ ಇರುವ ಮಕ್ಕಳಿಗೆ ಹಳದಿ ಕಾರ್ಡ್ ನೀಡಲಾಗಿದೆ. ಅವರಿಗೆ ಶಾಲೆಯಲ್ಲೇ ವಾರಕ್ಕೊಮ್ಮೆ ಕಬ್ಬಿಣಾಂಶ ಹಾಗೂ ಫೋಲಿಕ್ ಆಸಿಡ್ ಮಾತ್ರೆ ನೀಡಲಾಗುತ್ತದೆ. ಅವರ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುವ ಜವಾಬ್ದಾರಿಯನ್ನು ಆಶಾ ಕಾರ್ಯಕತೆಯರಿಗೆ ವಹಿಸಲಾಗಿದೆ ಎಂದು ತಿಳಿಸಿದರು.