ಗ್ರಾಹಕರಿಗೆ ವಂಚಿಸಿ ಮಳಿಗೆ ಮಾಲೀಕ ಪರಾರಿ

anekal cheeting
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿ ಚೀಟಿ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂ. ಕಟ್ಟಿಸಿಕೊಂಡು ರಾತ್ರೋರಾತ್ರಿ ಅಂಗಡಿ ಮುಚ್ಚಿಕೊಂಡು ಪರಾರಿಯಾಗಿರುವ ಪ್ರಕರಣ ತಾಲೂಕಿನ ನೆರಳೂರಿನಲ್ಲಿ ನಡೆದಿದೆ. ಮೋಸ ಹೋದ ಗ್ರಾಹಕರು ಅಂಗಡಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ನೆರಳೂರಿನಲ್ಲಿ ತಮಿಳುನಾಡು ಮೂಲದ ಆರ್ಮುಗಂ ತಿಂಗಳ ಹಿಂದೆ ಹ್ಯಾಂಡ್ ಬಿಲ್ ಹಿಡಿದು ಮನೆ ಮನೆಗೆ ಭೇಟಿ ನೀಡಿ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ಪ್ರಚಾರ ನಡೆಸಿದ್ದ. ಜತೆಗೆ ನೆರಳೂರಿನಲ್ಲಿ ರಾಬಿನ್ ಹೋಮ್ ನೀಡ್ಸ್ ಹೆಸರಿನ ಮಳಿಗೆ ತೆರೆದು ಜನರ ನಂಬಿಕೆ ಗಳಿಸಿದ್ದ ಎನ್ನಲಾಗಿದೆ. ಗೃಹೋಪಯೋಗಿ ವಸ್ತುಗಳಿಗಾಗಿ 400ಕ್ಕೂ ಅಧಿಕ ಮಂದಿ ಮುಂಗಡವಾಗಿ ಹಣ ನೀಡಿದ್ದರು. ಆರಂಭದಲ್ಲಿ ಹಣ ಪಡೆದು ವಸ್ತುಗಳನ್ನು ನೀಡಿದ್ದ ಮಾಲೀಕ ಜೂ.30ರವರೆಗೆ ಈ ಕೊಡುಗೆ ಇರಲಿದೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಸಾವಿರಾರು ಗ್ರಾಹಕರು ಮುಂಗಡ ಹಣ ಕಟ್ಟಿದ್ದರು. 50 ಲಕ್ಷ ರೂ.ಗೂ ಹೆಚ್ಚಿನ ಹಣ ಕಟ್ಟಿಸಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದು, ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಳಿಗೆಗೆ ನುಗ್ಗಿದ ಜನ: ಬಾಗಿಲು ಹಾಕಿರುವುದನ್ನು ನೋಡಿದ ಜನ ಆತಂಕಕ್ಕೆ ಒಳಗಾಗಿದ್ದಾರೆ, ಅಂಗಡಿ ಬಳಿ ಜಮಾಯಿಸಿದ ಜನರಲ್ಲಿ ಕೆಲವರು ಅಂಗಡಿ ಬಾಗಿಲಿನ ಬೀಗ ಒಡೆದು ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ನೂರಾರು ಮಹಿಳೆಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಮುಗಂ ಲಕ್ಷಾಂತರ ರೂಪಾಯಿ ಲಪಟಾಯಿಸಿ ಪರಾರಿಯಾಗಿದ್ದಾನೆ. ಅವರನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದರು.

ಅಂಗಡಿ ಮಾಲೀಕನಿಗೂ ಗೊತ್ತಿಲ್ಲ: ಆರ್ಮುಗಂ ಎಲ್ಲರ ನಂಬಿಕೆ ಗಳಿಸಿದಂತೆ ಅಂಗಡಿ ಮಾಲೀಕನಿಗೆ ಪ್ರತಿ ತಿಂಗಳು 12 ಸಾವಿರ ರೂ. ಬಾಡಿಗೆ ನೀಡುವುದಾಗಿ ತಿಳಿಸಿದ್ದ. ಅದೇ ರೀತಿ ಒಂದು ತಿಂಗಳ ಬಾಡಿಗೆಯನ್ನು ಮುಂಗಡ ನೀಡಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net