ಪುಂಡರ ಹಾವಳಿ ತಡೆಗೆ ಎಚ್ಚರ ಇರಲಿ

anekla police and public meeting
Published on

ವ್ಯಾಪಾರಿಗಳಿಗೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಪುರುಷೋತ್ತಮ್ ಕಿವಿಮಾತು


ವಿಜಯವಾಣಿ ಸುದ್ದಿಜಾಲ ಆನೇಕಲ್
ಕಾನೂನು ಸುವ್ಯಸ್ಥೆ ಕಾಪಾಡಲು ವ್ಯಾಪಾರಿಗಳೂ ಪೊಲೀಸರಿಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಪುಂಡಪೋಕರಿಗಳ ಬಗ್ಗೆ ಗಮನಕ್ಕೆ ಬಂದರೆ ಠಾಣೆಗೆ ಮಾಹಿತಿ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಎಂ.ಎಲ್. ಪುರುಷೋತ್ತಮ್ ಸೂಚಿಸಿದರು.
ಪಟ್ಟಣದ ಹೊಸೂರು ರಸ್ತೆಯ ಟೀ ಅಂಗಡಿ ಬಳಿ ಯುವಕರು ಗಾಂಜಾ ಮತ್ತಿನಲ್ಲಿ ಲಾಂಗ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪಟ್ಟಣ ಠಾಣೆಯಲ್ಲಿ ಪೊಲೀಸರು ಹಾಗೂ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ, ಪುಂಡಾಟಿಕೆ ತಡೆಗೆ ಕ್ರಮ ಕೈಗೊಳ್ಳದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು, ಪುಂಡರನ್ನು ಕೂಡಲೇ ಬಂಧಿಸಬೇಕು ಎಂದು ಸೂಚನೆ ನೀಡಿದರು.
ವ್ಯಾಪಾರಿಗಳ ಜವಾಬ್ದಾರಿ ಕೇವಲ ವ್ಯಾಪಾರ ಮಾಡುವುದಷ್ಟೇ ಅಲ್ಲ. ಪುಂಡ-ಪೋಕರಿಗಳ ಬಗ್ಗೆಯೂ ಗಮನವಹಿಸಬೇಕು. ಬೆದರಿಕೆ ಒಡ್ಡುವುದು, ಅಂಗಡಿಗಳ ಬಳಿ ಧಮಕಿ ಹಾಕುವುದು ಮಾಡಿದರೆ ಠಾಣೆಗೆ ಕರೆ ಮಾಡಿ ತಿಳಿಸಬೇಕು ಎಂದರು.
ಪೊಲೀಸರಿಗೆ ಪಾಠ: ಪಟ್ಟಣ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಪೊಲೀಸರು ಠಾಣೆಯಲ್ಲಿ ಕುಳಿತು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಕಡ್ಡಾಯವಾಗಿ ಆಗಾಗ್ಗೆ ಬೀಟ್ ವ್ಯವಸ್ಥೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಹಿತಕರ ಘಟನೆಗೆ ಕಾರಣವಾದವರನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಎಂ.ಎಲ್. ಪುರುಷೋತ್ತಮ್ ಸೂಚಿಸಿದರು. ಸಭೆ ಮುಗಿದ ಬಳಿಕ ಪುಂಡರ ಸೆರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಸಂಜೆವರೆಗೂ ಪಟ್ಟಣದ ವಿವಿಧೆಡೆ ಸಂಚರಿಸಿದ ದೃಶ್ಯ ಕಂಡುಬಂತು.
ಪುಂಡಾಟಕೆ ಪ್ರದೇಶ ಪರಿಶೀಲನೆ: ಪುಂಡರು ಪುಂಡಾಟಿಕೆ ನಡೆಸಿದ್ದ ಟೀ ಅಂಗಡಿ ಬಳಿ ತೆರಳಿದ ಪುರುಷೋತ್ತಮ್ ಸ್ಥಳ ಪರಿಶೀಲಿಸಿದರು. ಅಂಗಡಿಗಳ ಬಳಿ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಬೇಕು. ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಪುರಸಭೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಲೈಸೆನ್ಸ್ ಪಡೆಯುವವರಿಗೆ ಸಂಜೆ 6.ರ ನಂತರ ಅಂಗಡಿ ತೆರೆಯಬಾರದು ಎಂದು ಸೂಚಿಸಿದರು.

ಪುಡಿ ರೌಡಿಗಳಿಗೆ ತಾಕೀತು ಆನೇಕಲ್ ಪೊಲೀಸ್ ಠಾಣೆಗೆ ಕೆಲವು ಪುಡಿ ರೌಡಿಗಳನ್ನು ಕರೆಸಿಕೊಂಡ ಎಂ.ಎಲ್.ಪುರುಷೋತ್ತಮ್ ರೌಡಿಗಳ ಮಾಹಿತಿ ಕಲೆಹಾಕಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆತಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net