ಜಲಮೂಲ ಪುನಶ್ಚೇತನಕ್ಕೆ ಅಂತರ್ಜಲ ವೃದ್ಧಿ

anekla lake
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಜಲಮೂಲ ಪುನಶ್ಚೇತನದಿಂದ ಅಂತರ್ಜಲಮಟ್ಟ ಅಭಿವೃದ್ಧಿಯಾಗುತ್ತದೆ. ಇಂತಹ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ತಾಲೂಕಿನ ಶಾಂತಿಪುರ ಗ್ರಾಪಂನ ಚೂಡಸಂದ್ರದಲ್ಲಿ ಸೇ ಟ್ರೀಸ್ ಎನ್ವಿರಾನ್ಮೆಂಟ್ ಟ್ರಸ್ಟ್, ಚೂಡಸಂದ್ರ ವಸತಿ ಸಮುಚ್ಛಯ ವೆಲ್‌ಫೇರ್ ಅಸೋಸೀಯೇಷನ್ ಮತ್ತು ಗ್ರಾಪಂ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ ಕೆರೆಯನ್ನು ಉದ್ಘಾಟಿಸಿ, ಮಾತನಾಡಿದರು.
ಪಾರಂಪರಿಕ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮಾಭಿವೃದ್ಧಿಗೆ ಕೊಡುಗೆ ನೀಡಿರುವುದು ಶ್ಲಾಘನೀಯ. ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ವಾಕಿಂಗ್ ಪಾಥ್, ಕೆರೆ ಸುತ್ತಲೂ ಮರಗಳನ್ನು ಬೆಳೆಸುವ ಮೂಲಕ ಪರಿಸರ ಸ್ನೇಹಿಯಾಗಿಸಬೇಕು ಎಂದರು.
ಬೆಂಗಳೂರಿಗೆ ಹೊಂದಿಕೊಂಡಿರುವ ಶಾಂತಿಪುರ, ಹುಸ್ಕೂರು ಗ್ರಾಪಂ ಸೇರಿ ಈ ಭಾಗದ ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರನ್ನು ಪೂರೈಕೆ ಮಾಡುವುದು ನಮ್ಮ ಗುರಿ. ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಆನೇಕಲ್, ಅತ್ತಿಬೆಲೆ, ಸರ್ಜಾಪುರ ಸೇರಿ ಪ್ರಮುಖ ಸ್ಥಳಗಳಿಗೆ ಮೆಟ್ರೊ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಅಧಿಕಾರಾವಧಿಯಲ್ಲಿ ಕೈಗೊಂಡ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುವಂತಾಗಬೇಕು. ಆನೇಕಲ್ ತಾಲೂಕು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು, ಉಪನಗರವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net