

ವಿಜಯವಾಣಿ ಸುದ್ದಿಜಾಲ ಆನೇಕಲ್
ಭಾರತದಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಯಿದೆ. ಈ ಹಿಂದೆ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೊಗುತ್ತಿದ್ದರು. ಆದರೆ, ಈಗ ವಿದೇಶಿಗರು ಭಾರತದಲ್ಲಿ ಶಿಕ್ಷಣ ಪಡೆಯಲು ಬರುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ತಲ್ವಂತ್ ಸಿಂಗ್ ತಿಳಿಸಿದರು.
ಪಟ್ಟಣದ ಐಎಸ್‌ಬಿಆರ್ ವಿದ್ಯಾ ಸಂಸ್ಥೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ ಜೀವನದಲ್ಲಿ ಗುರಿ ಮುಖ್ಯ. ಸಮಾಜವನ್ನು ಬದಲಾಯಿಸಲು ಶಿಕ್ಷಣ ಪ್ರಮುಖವಾದ ಅಸ್ತ್ರವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಕಾನೂನು ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಹಾಗಾಗಿ ಪದವಿ ಪಡೆಯುವ ಜತೆಗೆ ಅಧ್ಯಯನದ ಸಂದರ್ಭದಲ್ಲಿ ವಕೀಲರೊಂದಿಗೆ ಚರ್ಚೆ, ವಕೀಲರ ಕಚೇರಿ ಭೇಟಿ, ವಿವಿಧ ಪ್ರಾಯೋಗಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.
ಐಎಸ್‌ಬಿಆರ್ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಮನೀಷ್ ಕೊತಾರಿಯಾ ಮಾತನಾಡಿ, ಕಂಪನಿಗಳಲ್ಲಿ ಉದ್ಯೋಗ ಪಡೆಯಲು ವಿಷಯ ಜ್ಞಾನದ ಜತೆಗೆ ಕೌಶಲ ಮತ್ತು ತಾಂತ್ರಿಕ ಜ್ಞಾನ ಅತ್ಯಂತ ಮುಖ್ಯ. ಉದ್ಯೋಗಗಳನ್ನು ಹುಡುಕುವ ಬದಲಿಗೆ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ ಎಂದರು.
ಟರ್ನ್‌ಸ್ಟೋನ್ ಹಾಸ್ಪಿಟಾಲಿಟಿ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೆ.ಮೋಹನ್ ಕುಮಾರ್, ಚಾರ್ಟೆಟ್ ಏರ್‌ಲೈನ್ ಕ್ಯಾಪ್ಟನ್ ರಾಕೇಶ್ ಮಲಿಕ್, ಐಎಸ್‌ಬಿಆರ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ತಪನ್ ನಾಯಕ್, ಲಕ್ಷ್ಮೀನಾರಾಯಣ್, ರಘುನಾಥ ಕುಮಾರ್, ಬಲವಂತ್ ಕಳಸ್ಕರ್, ಲೋಕೇಶ್‌ರೆಡ್ಡಿ, ವಿಜಯ, ಭಾರ್ಗಬಿ ಬರುಬಾ, ಎ.ನಾಗಿಣಿ, ಲಕ್ಷ್ಮೀ, ಶ್ರೀಕಾಂತ್, ಸಂತೋಷ್ ಪಟ್ನಾಯಕ್ ಇದ್ದರು.