

ವಿಜಯವಾಣಿ ಸುದ್ದಿಜಾಲ ಆನೇಕಲ್
ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಹೆಚ್ಚಿನ ಅನುದಾನ ದೊರಕಿಸಿಕೊಡಬೇಕು ಎಂದು ಎಂದು ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ ಹೇಳಿದರು.
ತಾಲೂಕಿನ ಹುಲಿಮಂಗಲ ಗ್ರಾಪಂನಲ್ಲ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
ಹುಲಿಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಿ ಪುರಸಭೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಗಮನಕ್ಕೆ ತಂದಿದ್ದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಗ್ರಾಪಂಅನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲು ಒತ್ತಾಯಿಸಲಾಗುವುದು ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಬಂದರೆ ರಸ್ತೆ, ಕುಡಿಯುವ ನೀರು, ಬೀದಿದೀಪ ಹಾಗೂ ಇನ್ನಿತರ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಸಯ್ಯದ್ ಸಾದಿಕ್ ಮಾತನಾಡಿ, ಈ ಹಿಂದೆ ಗ್ರಾಪಂ ಕಟ್ಟಡ ತುಂಬಾ ಚಿಕ್ಕದಾಗಿತ್ತು, ಕಟ್ಟಡವನ್ನು ಮೇಲ್ದರ್ಜೆಗೇರಿಸಿ ಉನ್ನತವಾದ ಸಭಾಂಗಣ ಹಾಗೂ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ಸಮಸ್ಯೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದರು.
ಸಭೆಯಲ್ಲಿ ಕಸದ ಸಮಸ್ಯೆ ಕುರಿತು ಸದಸ್ಯರು ಅಧಿಕಾರಿಗಳ ಗಮನ ಸೆಳೆದರು.
ಸದಸ್ಯರಾದ ರಾಮಾಂಜನೇಯ, ಗಜೇಂದ್ರ, ಆದಿಲ್ ಅಹ್ಮದ್, ಮಂಜುನಾಥ, ಜಯಲಕ್ಷ್ಮಮ್ಮ, ಷರೀಫ್, ರವಿಕುಮಾರ್, ಚಿಕ್ಕಮ್ಮ, ಕಾರ್ಯದರ್ಶಿ ಕೃಷ್ಣಪ್ಪ ಇದ್ದರು.