

ವಿಜಯವಾಣಿ ಸುದ್ದಿಜಾಲ ಆನೇಕಲ್
ನಗರದ ವ್ಯವಸಾಯ ಸೇವಾ ಸಹಕಾರ ಸಂಘ 6 ಲಕ್ಷ ರೂ. ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಾಲ ಪಡೆದವರ ಕ್ಷೇತ್ರ ಹಾಗೂ ಸಾಲ ಪಡೆಯದವರ ಕ್ಷೇತ್ರದಲ್ಲಿನ ಎಲ್ಲ ಸದಸ್ಯರೂ ದಿನ ನಿತ್ಯದ ಚಟುವಟಿಕೆಯಲ್ಲಿ ಪಾಲ್ಗೊಂಡು ಹೊಸ ನಿಯಮಗಳ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಹಕ್ಕನ್ನು ಪಡೆಯಬಹುದಾಗಿದೆ ಎಂದರು.
ಹಸುಗಳ ಸಾಲ, ಶೂನ್ಯ ಬಡ್ಡಿ, ಶೇ.3 ಬಡ್ಡಿ ದರದಲ್ಲಿ ರೂ. 2 ಲಕ್ಷ ವರೆವಿಗೂ ಸಾಲ ದೊರೆಯಲಿದ್ದು, ಅಗತ್ಯ ದಾಖಲೆಗಳನ್ನು ನೀಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದಾನಿಗಳ ನೆರವಿನಿಂದ ನಿರ್ಮಿಸಿದ ಸ್ವಂತ ಕಟ್ಟಡದಲ್ಲಿ ವಾರ್ಷಿಕ ಮಹಾಸಭೆ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ನಿರ್ದೇಶಕ ಸೋಮಶೇಖರ ರೆಡ್ಡಿ ಮಾತನಾಡಿ, ಹಾಲಿ ಇರುವ ಪಡಿತರ ವಿತರಣೆ ಪ್ರಮಾಣವನ್ನು ಇನ್ನಷ್ಟು ವಿಸ್ತರಿಸುವ ಜತೆಗೆ ರಸಗೊಬ್ಬರ ಮತ್ತು ಕೀಟನಾಶಕ ಔಷಧ ಮಳಿಗೆ ತೆರೆದು ಕೃಷಿಗೆ ಪೂರಕವಾಗಿ ಸಂಸ್ಥೆಯನ್ನು ಮುನ್ನಡೆಸಲು ತೀರ್ಮಾನಿಸಲಾಗಿದೆ. ರೈತರು ತಾವು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ ಹೆಚ್ಚಿನ ಬಡ್ಡಿ ತೆರವುದನ್ನು ತಪ್ಪಿಸಿಕೊಳ್ಳಬಹುದು ಎಂದರು.
ಜಿಲ್ಲಾ ಬ್ಯಾಂಕಿನ ನಿರ್ದೇಶಕ ಸಹಕಾರ ರತ್ನ ಬಿ.ಜಿ. ಆಂಜಿನಪ್ಪ ಮಾತನಾಡಿ, ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಭವನದಲ್ಲಿ 100 ಕುರ್ಚಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದರು.
ನಿರ್ದೇಶಕರಾದ ತಿಲಕ್‌ಗೌಡ, ಸೋಮಶೇಖರ್, ಜಿ. ಗೋಪಾಲ್, ಸಿಇಒ ವೆಂಕಟಮಾರೇಗೌಡ ಇದ್ದರು.