

ವಿಜಯವಾಣಿ ಸುದ್ದಿಜಾಲ ಆನೇಕಲ್
ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನ, ಪ್ರತಿಷ್ಠಾನವು ವಿದ್ಯಾರ್ಥಿಗಳ ಮೇಲೆ ಹೂಡುವ ಬಂಡವಾಳ ಎಂದು ಸನ್‌ಸೇರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇಖರ್ ವಾಸನ್ ಹೇಳಿದರು.
ತಾಲೂಕಿನ ಜಿಗಣಿಯ ಸನ್‌ಸೇರಾ ಪ್ರತಿಷ್ಠಾನದಿಂದ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ 184 ವಿದ್ಯಾರ್ಥಿಗಳಿಗೆ ಒಟ್ಟು 24.9 ಲಕ್ಷ ರೂ.ಮೊತ್ತದ ವಿದ್ಯಾರ್ಥಿವೇತನವನ್ನು ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ ಅವರೊಂದಿಗೆ ವಿತರಿಸಿ ಮಾತನಾಡಿದರು.
ಬಂಡವಾಳಕ್ಕೆ ಪ್ರತಿಯಾಗಿ ಉತ್ತಮ ಫಲಿತಾಂಶ, ಸಾಧನೆ ಮಾಡಿ, ಉತ್ತಮ ಉದ್ಯೋಗಗಳನ್ನು ಪಡೆಯುವಂತಾಗಬೇಕು ಎಂಬುದು ಆಶಯವಾಗಿದೆ ಎಂದರು.
ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗಾಗಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ 38 ಮಂದಿ ಶಿಕ್ಷಕರನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಗಿದೆ. ತಾಲೂಕಿನ ನೂರು ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ವಹಣೆಗೆ ಸಂಸ್ಥೆಯು ವಾರ್ಷಿಕ 20 ಸಾವಿರದಂತೆ ಪ್ರತಿ ಶಾಲೆಗೆ ನೆರವು ನೀಡಲು ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ ಮಾತನಾಡಿ, ಶೈಕ್ಷಣಿಕ ನೆರವು ನೀಡುವಿಕೆಯಲ್ಲಿ ಸನ್‌ಸೇರಾ ಪ್ರತಿಷ್ಠಾನ ಮುಂಚೂಣಿಯಲ್ಲಿದ್ದು, ಸರ್ಕಾರಿ ಶಾಲೆಗಳಿಗೆ ಯೋಗ, ಸಂಗೀತ, ಕಂಪ್ಯೂಟರ್, ಚಿತ್ರಕಲಾ ಶಿಕ್ಷಕರ ನೆರವನ್ನು ನೀಡಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ, ಚಿಂತಕ ಯೋಗಿ ಅನೀಷ್, ಸನ್‌ಸೇರಾ ಸಂಸ್ಥೆಯ ಗುರುದತ್, ಮೋಹನ್, ಈರಪ್ಪ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎನ್.ವೀರಭದ್ರಪ್ಪ, ಜಿ.ನಾಗರಾಜು ಇದ್ದರು.