

ವಿಜಯವಾಣಿ ಸುದ್ದಿಜಾಲ ಆನೇಕಲ್
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಮರುತನಿಗೆ ಮಾಡುವ ಮೂಲಕ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆ ಮಾಡಿದರು.
ವೇದಿಕೆಯ ಉಪಾಧ್ಯಕ್ಷ ಎನ್.ಲೋಕೇಶ್‌ಗೌಡ ಮಾತನಾಡಿ, ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಬೇಕು. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುವ ಕೆಲಸವನ್ನು ಮಾಡುತ್ತೇವೆ ಆದರೆ ಸೌಜನ್ಯ ಪ್ರಕರಣದಲ್ಲಿ ತನಿಖೆ ದಾರಿ ತಪ್ಪಿರುವುದು ದುರದೃಷ್ಟಕರ ಎಂದರು.
ಪ್ರಕರಣದಲ್ಲಿ ಭಾಗಿಯಾದ ನಿಜವಾದ ಅಪರಾಧಿ ಯಾರು ಎಂದು ಕಂಡು ಹಿಡಿಯುವಲ್ಲಿ ಇಷ್ಟೊಂದು ವಿಳಂಬ ಆಗಿರುವುದು ತನಿಖೆಯ ದಾರಿ ತಪ್ಪಿಸಲು ಬೇಕಾದ ಕೆಲಸವನ್ನು ಮಾಡಲಾಗಿದೆ. ಸೌಜನ್ಯಳಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿ ಈ ಹಿಂದೆಯೂ ಹಲವು ಹೋರಾಟಗಳಾಗಿವೆ, ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ. ನಿಜವಾದ ಆರೋಪಿ ಯಾರು ಎಂದು ಕಂಡುಹಿಡಿಯದೆ ತನಿಖೆಯ ಹಾದಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರೇಣುಕಾ ಮಾತನಾಡಿ, ಕೃತ್ಯ ನಡೆದಿದೆ ಎಂದ ಮೇಲೆ ನಿಜವಾದ ಆರೋಪಿ ಯಾರು ಎಂದು ಕಂಡು ಹಿಡಿಯುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಆರೋಪಿ ಯಾರೇ ಆಗಿದ್ದರೂ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕಿತ್ತು. ಇಷ್ಟು ವರ್ಷ ಕಳೆದರೂ ಸಹ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಇದುವರೆಗೂ ಆರೋಪಿಯ ಬಂಧನವೂ ಆಗಿಲ್ಲ ನ್ಯಾಯವೂ ಕೂಡ ಸಿಗಲಿಲ್ಲ. ಕೂಡಲೇ ತನಿಖೆ ನಡೆಸಿ ನ್ಯಾಯ ದೊರಕಿಸಬೇಕು ಎಂದರು.
ಸಮರ ಸೇನೆ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ, ತಾಲೂಕು ಉಪಾದ್ಯಕ್ಷ ವಿಜಿ, ಗೌರವಾಧ್ಯಕ್ಷ ರಾಜಣ್ಣ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೇಣುಕಾ, ನಗರ ಅಧ್ಯಕ್ಷ ರೇಣುಕಾ, ಮರಿಯಪ್ಪ, ಶಶಿ, ಆನಂದ್ ಇದ್ದರು.