

ವಿಜಯವಾಣಿ ಸುದ್ದಿಜಾಲ ಆನೇಕಲ್
ಪೊಲೀಸರು ಮೌನವಾಗಿದ್ದಾರೆ ಎಂದು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಎಂ.ಎಲ್. ಪುರುಷೋತ್ತಮ್ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆನೇಕಲ್ ಠಾಣೆಯಲ್ಲಿ ರೌಡಿ ಶೀಟರ್ ಪರೇಡ್ ನಡೆಸಿ, ಮಾತನಾಡಿದರು.
ಕೆಲ ದಿನಗಳಿಂದ ಆನೇಕಲ್ ಉಪವಿಭಾಗದ ವ್ಯಾಪ್ತಿಯಲ್ಲಿ ಕೊಲೆಯತ್ನ, ದರೋಡೆ, ಕಳ್ಳತನ, ಹಫ್ತಾ ವಸೂಲಿ ಪ್ರಕರಣಗಳು ಹೆಚ್ಚಾಗಿವೆ. ಜತೆಗೆ ಗಾಂಜಾ ಹಾಗೂ ಮದ್ಯದ ಅಮಲಿನಲ್ಲಿ ಮಾರಕಾಸ್ತ್ರ ಹಿಡಿದು ಹಾಡಹಗಲೇ ನಡುರಸ್ತೆಯಲ್ಲಿ ಪುಡಿ ರೌಡಿಗಳ ಸಾರ್ವಜನಿಕರಿಗೆ ಭಯಹುಟ್ಟಿಸುತ್ತಿದ್ದು, ಅಂತಹವರನ್ನು ಬಂಧಿಸಿ ತಕ್ಕ ಶಾಸ್ತಿ ಮಾಡಲಾಗುವುದು ಎಂದರು.
ರೌಡಿ ಶೀಟರ್‌ಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಅಥವಾ ದುಷ್ಕೃತ್ಯಗಳಿಗೆ ಬೆಂಬಲವಾಗಿ ನಿಲ್ಲುವುದು ಕಂಡು ಬಂದರೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದರು.
ಆನೇಕಲ್ ಠಾಣೆಯ ವ್ಯಾಪ್ತಿಯಲ್ಲಿರುವ ಎಲ್ಲ ರೌಡಿಶೀಟರ್‌ಗಳ ಸಂಪೂರ್ಣ ವಿವರ ಠಾಣೆಯಲ್ಲಿರಬೇಕು. ಎಲ್ಲಿ ವಾಸ ಮಾಡುತ್ತಿದ್ದಾರೆ. ದಿನನಿತ್ಯದ ಚಟುವಟಿಕೆ ಏನು ಎನ್ನುವ ಬಗ್ಗೆಯೂ ಮಾಹಿತಿ ಕಲೆಹಾಕಬೇಕು. ಠಾಣೆಯ ಕರೆದಾಗ ನಿಗದಿತವಾಗಿ ಬರದವರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಪೊಲೀಸರಿಗೆ ತಿಳಿಸಿದರು.
ಎಎಸ್‌ಐಗಳಾದ ಶ್ರೀನಿವಾಸ್, ರಾಜು, ಸಿಬ್ಬಂದಿ ಮಣಿ, ಶಂಕರ್, ಸತೀಶ್ ಇದ್ದರು
ಸಮಾಜಘಾತುಕ ಕೃತ್ಯ ಸಲ್ಲ: ಇತ್ತೀಚೆಗೆ ಕೆಲವರು ಜಮೀನುಗಳಿಗೆ ಬೇಲಿ ಹಾಕುವುದು, ಟೀ ಅಂಗಡಿ ಬಲಿ, ಬಾರ್ ಬಳಿ ಗಲಾಟೆ ಮಾಡುವುದು, ಸುಲಿಗೆ, ಕೊಲೆ ಯತ್ನ ಹೀಗೆ ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಸಂಪೂರ್ಣ ವಿವರವನ್ನು ಕಲೆ ಹಾಕಲಾಗುತ್ತಿದೆ. ರೌಡಿ ಶೀಟರ್‌ಗಳು ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾಗದೆ ಮಾದರಿ ವ್ಯಕ್ತಗಳಾಗಿ ಬದುಕು ನಡೆಸಬೇಕು ಎಂದು ಪುರುಷೋತ್ತಮ್ ಕಿವಿಮಾತು ಹೇಳಿದರು.
ಕರ್ತ್ಯವ್ಯ ಲೋಪವಾಗದಿರಲಿ: ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ಕರ್ತವ್ಯ ಲೋಪ ಆಗಬಾರದು. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ಠಾಣೆ ಸಿಬ್ಬಂದಿಗೆ ಕಿವಿಮಾತು ಹೇಳಿದ ಪುರುಷೋತ್ತಮ್, ಠಾಣೆಯಲ್ಲೇ ಹೆಚ್ಚು ಸಮಯ ಕಳೆಯುವ ಬದಲು ಜನರ ನಡುವೆ ಕೆಲಸ ಮಾಡಿದರೆ ಅಪರಾಧ ಕೃತ್ಯ ತಡೆಯಲು ಸಾಧ್ಯ ಎಂದರು.