ಆರೋಪಿ ಕಾಲಿಗೆ ಗುಂಡೇಟು

anekal police shootout
Published on

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಆರೋಪಿ

ವಿಜಯಾಣಿ ಸುದ್ದಿಜಾಲ ಆನೇಕಲ್
ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯ ಸೋಮಶೇಖರ್ (25) ಗಾಯಾಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಹಳೇವೂರಿನ ಹರೀಶ್ (33) ಹಾಗೂ ಜಯಂತ್ ರಾವ್ (20) ಅವರನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ: ಬ್ಯಾಟರಾಯನದೊಡ್ಡಿ ಸಮೀಪದ ಹಳೇವೂರಿನಲ್ಲಿ ಆ.12 ರಂದು ಸಂಜೆ 7 ಗಂಟೆ ಸುಮಾರಿಗೆ ಮುನಿರತ್ನ (38) ಅವರು ಸಹೋದರಿ ಮಗುವನ್ನು ಆಟವಾಡಿಸುತ್ತಿದ್ದ ವೇಳೆ ಸೋಮಶೇಖರ, ಹರೀಶ್ ಮತ್ತು ಜಯಂತ್ ರಾವ್, ಗಾಂಜಾ ಮತ್ತಿನಲ್ಲಿ ಇಬ್ಬರ ಮೇಲೂ ಹಲ್ಲೆ ಮಾಡಿ, ಮಗುವನ್ನು ಪೊದೆಗೆ ಎಸೆದು ಮುನಿರತ್ನಮ್ಮಳಿಗೆ ಡ್ಯಾಗರ್ ಹಾಗೂ ಚಾಕು ತೋರಿಸಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಆರೋಪಿಗಳ ಚಲನವಲನ ಆಧರಿಸಿ ಬಂಧಿಸಿದ್ದರು.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಡ್ಯಾಗರ್ ಹಾಗೂ ಬಟ್ಟೆ ವಶಪಡಿಸಿಕೊಂಡು ಸ್ಥಳ ಮಹಜರು ನಡೆಸಲು ಶುಕ್ರವಾರ ಪ್ರಮುಖ ಆರೋಪಿ ಸೋಮಶೇಖರ್‌ನನ್ನು ಕಗ್ಗಲೀಪುರ ರಸ್ತೆಯ ಹಕ್ಕಿಪಿಕ್ಕಿ ಕಾಲನಿ ಬಳಿ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ ಆಯುಧ ತೋರಿಸುವ ನೆಪದಲ್ಲಿ ಡ್ಯಾಗರ್‌ನಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಪೇದೆ ಮಾದಪ್ಪ ಗಾಯಗೊಂಡಿದ್ದು, ಜಿಗಣಿಯ ವಿಜಯಶ್ರೀ ಆಸ್ಪತ್ರೆಗೆ ಮತ್ತು ಆರೋಪಿಯನ್ನು ಬೊಮ್ಮಸಂದ್ರದ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net