ಆನೇಕಲ್:ಪಟ್ಟಣದ ಪುರಸಭೆ ಅಧ್ಯಕ್ಷೆ ಸ್ಥಾನಕ್ಕೆ ಸುಧಾನಿರಂಜನ್ ಶನಿವಾರ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸುಧಾ ನಿರಂಜನ್ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
2024ರ ಆಗಸ್ಟ್ 31 ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ಅವಧಿ ಇನ್ನೂ ಮೂರು ತಿಂಗಳು ಇರುವಾಗಲೇ ರಾಜೀನಾಮೆ ನೀಡಿರುವುದು ಸಾಕಷ್ಟು ಕುತೂಹಲ ಮೂಡಿದೆ. ಪುರಸಭೆಗೆ ಬಿಜೆಪಿಯಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಸುಧಾ ನಿರಂಜನ್ ಅವರು ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷರಾಗಿದ್ದರು. ಹೀಗಾಗಿ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಇದಾದ ಬಳಿಕ ಆನೇಕಲ್ ಬಿಜೆಪಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿದ್ದು, ರಾಜ್ಯ ನಾಯಕರು ಮಧ್ಯಪ್ರವೇಶಿಸಿದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರಲಿಲ್ಲ, ಈ ನಡುವೆ ಸುಧಾ ನಿರಂಜನ್ ರಾಜೀನಾಮೆ ನೀಡಿದ್ದು, ಮೂರು ತಿಂಗಳ ಅಧಿಕಾರಾವಧಿಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಪ್ರಶ್ನೆ ಎದ್ದಿದೆ.
ಶ್ಯಾಮಲಾಗೆ ಪಟ್ಟಕಟ್ಟಲು ಸಿದ್ಧತೆ
ಕಳೆದ ಬಾರಿ ಪುರಸಭೆ ಸದಸ್ಯೆ ಶ್ಯಾಮಲಾ ಬಿ.ನಾಗರಾಜು ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಸುಧಾ ನಿರಂಜನ್ ಅಧ್ಯಕ್ಷರಾಗಿದ್ದರು, ಇದಾದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು ಇದನ್ನು ಸರಿಪಡಿಸಲು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಹುಲ್ಲಳ್ಳಿ ಶ್ರೀನಿವಾಸ್ ಅವರು ಮತ್ತೆ ಶ್ಯಾಮಲಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ರಾಜೀನಾಮೆ ಕೊಡಿಸಿದ್ದಾರೆ ಎನ್ನಲಾಗಿದೆ.
ಉಚ್ಚಾಟನೆ ಆದೇಶ ವಾಪಸ್
ಆನೇಕಲ್ ಪುರಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪ ಹೊತ್ತಿದ್ದ ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್ ಮತ್ತು ಸದಸ್ಯ ಸುರೇಶ್‌ಬಾಬು ಅವರ ಉಚ್ಛಾಟನೆಯನ್ನು ಬಿಜೆಪಿ ಹಿಂಪಡೆದಿದೆ. ಆನೇಕಲ್ ಪುರಸಭೆಗೆ 2024ರ ಆ.31ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆದು ಸುಧಾ ನಿರಂಜನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರಲ್ಲಿ ಸುರೇಶ್‌ಬಾಬು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಇಬ್ಬರನ್ನು ಬಿಜೆಪಿ ಉಚ್ಚಾಟನೆ ಮಾಡಿತ್ತು. ಆನೇಕಲ್ ಬಿಜೆಪಿಯಲ್ಲಿ ಈ ಬೆಳವಣಿಗೆ ಸಾಕಷ್ಟು ಗೊಂದಲಗಳಾಗಿ ಪಟ್ಟಣದಲ್ಲಿ ಬಿಜೆಪಿ ಎರಡು ಬಣ ಆಗಿತ್ತು, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹಾಗೂ ಕಳೆದ ಬಾರಿ ಬಿಜೆಪಿಯಿಂದ ಶಾಸಕ ಸ್ಥಾನದ ಅಭ್ಯರ್ಥಿ ಆಗಿದ್ದ ಹುಲ್ಲಳ್ಳಿ ಶ್ರೀನಿವಾಸ್ ನಡುವೆ ಸಾಕಷ್ಟು ಆರೋಪ ಪ್ರತ್ಯಾರೋಪ ಕೂಡ ನಡೆದು ಬಳಿಕ ಇದು ರಾಜ್ಯ ಬಿಜೆಪಿಯವರೆಗೂ ತಲುಪಿತ್ತು. ತಾಲೂಕಿನಲ್ಲಿ ಬಿಜೆಪಿಯನ್ನು ಸದೃಢಗೊಳಿಸಬೇಕು ಹಾಗೂ ಪಕ್ಷ ಸಂಘಟನೆಯನ್ನು ಮತ್ತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲರನ್ನು ಒಗ್ಗೂಡಿಸುವ ಸಲುವಾಗಿ ಶುಕ್ರವಾರ ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು ಉಚ್ಚಾಟನೆ ಆದೇಶ ಹಿಂಪಡೆದಿದ್ದಾರೆ.
ಕನಸು ಕಟ್ಟಿಕೊಂಡು ಅಧ್ಯಕ್ಷರಾಗಿದ್ದ ಸುಧಾ
ಆನೇಕಲ್ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ ಒಳ್ಳೆಯ ಆಡಳಿತ ನೀಡಬೇಕು ಎನ್ನುವ ಕನಸು ಕಟ್ಟಿಕೊಂಡು ಅಧ್ಯಕ್ಷರಾಗಿದ್ದ ಸುಧಾ ನಿರಂಜನ್ ಪುರಸಭೆಯಲ್ಲಿ ಪಾರದರ್ಶಕ ಆಡಳಿತ ತರುವಲ್ಲಿ ಸಫಲರಾಗಿದ್ದರು. ಆದರೆ ಅನುದಾನ ಕೊರತೆ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ.
ನಾಲ್ವರು ಸದಸ್ಯರ ಅಮಾನತಿಗೆ ಮನವಿ
ಮೂರು ತಿಂಗಳಿಂದ ಕೌನ್ಸಿಲ್ ಸಭೆಗಳಿಗೆ ಹಾಜರಾಗದ ಆನೇಕಲ್ ಪುರಸಭೆಯ ನಾಲ್ವರು ಸದಸ್ಯರನ್ನು ಅಮಾನತು ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
ಆನೇಕಲ್ ಪುರಸಭೆಯ 11 ನೇ ವಾರ್ಡ್ ಪ್ರಗತಿ ಬಿ.ವಿ., 13ನೇ ವಾರ್ಡ್ ಭಾಗ್ಯಲಕ್ಷ್ಮೀ, 14ನೇ ವಾರ್ಡ್ ಸಿ.ಆರ್.ಶ್ಯಾಮಲಾ ಹಾಗೂ 18ನೇ ವಾರ್ಡ್ ರವಿಚೇತನ್ ಪುರಸಭೆ ಕೌನ್ಸಿಲ್ ಸಭೆಗಳಿಗೆ ಯಾವುದೇ ಕಾರಣ ನೀಡದೆ ನಿರಂತವಾಗಿ ಗೈರಾಗಿದ್ದು, ಕೂಡಲೇ ಅಮಾನತು ಮಾಡಬೇಕು ಎಂದು ಸದಸ್ಯ ರಾಜೇಂದ್ರ ಪ್ರಸಾದಬಾಬು ಡಿಸಿಗೆ ಪತ್ರಬರೆದಿದ್ದಾರೆ.
2024ರ ಅ.16ರ ಸಾಮಾನ್ಯ ಸಭೆ, 2025ರ ಜ.20ರಂದು ನಡೆದ ವಿಶೇಷ ಸಭೆ, 2025ರ ಮಾ.03ರ ಪೂರ್ವ ಭಾವಿ ಆಯ-ವ್ಯಯ ಸಭೆ, ಮಾ.14ರ ಸಾಮಾನ್ಯ ಸಭೆ, ಮಾ.26ರ ಸಾಮಾನ್ಯ ಆಯಾ-ವ್ಯಯ ಸಭೆ ಮತ್ತು ಮೇ 23ರ ಸಾಮಾನ್ಯ ಸಭೆಗೆ ನಾಲ್ವರೂ ಗೈರಾಗಿದ್ದಾರೆ. ಗೈರಾದ ಸದಸ್ಯರು ಅಧ್ಯಕ್ಷರಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸಿದ್ದಲ್ಲಿ ವಿವರ ಹಾಗೂ ದಾಖಲಾತಿಗಳೊಂದಿಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸಿ ಎಂದು ಮನವಿ ಮಾಡಿದ್ದಾರೆ.
ಒಂದು ಪಕ್ಷ ಅಂದಾಗ ಅಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುವುದು ಸಾಮಾನ್ಯ. ಎಲ್ಲರನ್ನೂ ಹೊಂದಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನನ್ನ ಮೇಲಿದ್ದು, ಹಿರಿಯರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತದೆ, ಸಣ್ಣ ಪುಟ್ಟ ಗೊಂದಲಗಳಿಗೆ ತೆರೆ ಬೀಳಲಿದೆ. - ಹುಲ್ಲಳ್ಳಿ ಶ್ರೀನಿವಾಸ್,ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಆನೇಕಲ್ ಪುರಸಭೆ ಆದ್ಯಕ್ಷ ಸ್ಥಾನಕ್ಕೆ ಸುಧಾ ನಿರಂಜನ್ ರಾಜೀನಾಮೆ ನೀಡಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿಯನ್ನು ನಾವು ಕಣಕ್ಕೆ ಇಳಿಸುತ್ತೇವೆ, ಈ ಬಗ್ಗೆ ಶಾಸಕ ಬಿ.ಶಿವಣ್ಣ ತೀರ್ಮಾನ ಮಾಡುತ್ತಾರೆ, ರಾಜಕಾರಣವನ್ನು ಯಾವ ಸಮಯದಲ್ಲಿ ಹೇಗೆ ಮಾಡಬೇಕು ಎನ್ನುವುದನ್ನು ಕಲಿತಿದ್ದೇವೆ. -ಎನ್.ಎಸ್.ಪದ್ಮನಾಭ್ ಪುರಸಭಾ ಮಾಜಿ ಅಧ್ಯಕ್ಷ ಪಕ್ಷದಿಂದ ಉಚ್ಚಾಟನೆ ಆಗಿದ್ದವರು ಈ ಹಿಂದೆಲ್ಲ ಬಿಜೆಪಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಕೆಲವು ಕಾರಣಗಳಿಂದ ಆಗಿದ್ದ ನಿರ್ಧಾರವನ್ನು ಮತ್ತೆ ವಾಪಸ್ ಪಡೆದಿದ್ದು ಸುಧಾ ನಿರಂಜನ್ ಹಾಗೂ ಸುರೇಶ್ ಬಾಬು ಸೇರಿ ಅವರ ಜೊತೆಗಿದ್ದವರು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. -ಎನ್.ಆರ್.ರಮೇಶ್, ಬೆಂಗಳೂರು ನಗರ ಜಿಲ್ಲಾ ಮಾಜಿ ಅಧ್ಯಕ್ಷ ಪಕ್ಷದ ಯಾವುದೇ ಸಿದ್ಧಾಂತಗಳಿಗೂ ವಿರೋಧವಾಗಿ ನಡೆದುಕೊಂಡಿಲ್ಲ, ಎಲ್ಲ ಮಾಹಿತಿಯನ್ನು ಹಿರಿಯ ನಾಯಕರಿಗೆ ತಿಳಿಸಿದ್ದು ಅವರು ಉಚ್ಚಾಟನೆಯನ್ನು ವಾಪಸ್ ಪಡೆದು ಪಕ್ಷ ಸಂಘಟನೆಗೆ ಸೂಚಿಸಿದ್ದಾರೆ. ಆನೇಕಲ್‌ನಲ್ಲಿ ಬಿಜೆಪಿಯನ್ನು ಸದೃಢ ಮಾಡುವುದೇ ನನ್ನ ಗುರಿ. -ಸುರೇಶ್ ಬಾಬು ಪುರಸಭಾ ಸದಸ್ಯ