

ವಿಜಯವಾಣಿ ಸುದ್ದಿಜಾಲ ಆನೇಕಲ್
ಚಂದ್ರಯಾನ ಯಶಸ್ವಿ ವಿಶಿಷ್ಟ ಮೈಲಿಗಲ್ಲಾಗಿದ್ದು, ಭಾರತವೇ ಹೆಮ್ಮೆ ಪಡುವಂತಹ ಕ್ಷಣವನ್ನು ಇಸ್ರೋ ನೀಡಿದೆ. ವಿಜ್ಞಾನಿಗಳ ಶ್ರಮಕ್ಕೆ ಉತ್ತಮ ಪ್ರತಿಫಲ ದೊರೆತಿದ್ದು, ಮತ್ತಷ್ಟು ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದೆ ಎಂದು ಇಸ್ರೋ ಯುಆರ್ ರಾವ್ ಸೆಟಲೈಟ್ ಸೆಂಟರ್ ನಿರ್ದೇಶಕ ಎಂ. ಶಂಕರನ್ ಅಭಿಪ್ರಾಯಪಟ್ಟರು.
ಬಾಹ್ಯಾಕಾಶ ಯಾನಗಳಿಗೆ ವಿವಿಧ ಬಿಡಿ ಭಾಗಗಳ ಪೂರೈಕೆ ಮಾಡುವ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಅಜ್ರಿ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಭೇಟಿ ನೀಡಿದ್ದ ಇಸ್ರೋ ವಿಜ್ಞಾನಿಗಳ ತಂಡದೊಂದಿಗೆ ಕಂಪನಿಯ ವಿವಿಧ ವಿಭಾಗ ಪರಿಶೀಲಿಸಿ ಮಾತನಾಡಿದರು.
ಅಜ್ರಿ ಕಂಪನಿಯು ಬಾಹ್ಯಾಕಾಶ ಯಾನಗಳಿಗೆ ನಿರ್ಣಾಯಕ ಅಂಗವಾದ ಹೀಟ್ ಪೈಪ್‌ಅನ್ನು ಪೂರೈಸಲಿದೆ. ಇಸ್ರೋ ಸಂಸ್ಥೆಗೆ ಈ ವಸ್ತು ನೀಡುತ್ತಿರುವ ಎರಡನೇ ಪೂರೈಕೆದಾರರಾಗಿದ್ದು, ಚಂದ್ರಯಾನ 3ರ ಉಪಗ್ರಹದಲ್ಲಿ ಶೇ.60 ವಸ್ತುಗಳು ಮೇಕ್ ಇನ್ ಇಂಡಿಯಾ ಮೂಲಕ ಸಿದ್ಧಪಡಿಸಿದ್ದ ವಸ್ತುಗಳನ್ನೇ ಬಳಸಿದ್ದು ವಿಶೇಷ ಎಂದರು.
ಬಾಹ್ಯಾಕಾಶಯಾನಗಳಲ್ಲಿ ಹೀಟ್‌ಪೈಪ್ ಪಾತ್ರ ಮಹತ್ವವಾದದ್ದು. ಬಾಹ್ಯಾಕಾಶದ ವಾತಾವರಣದಲ್ಲಿ ಉಷ್ಣಾಂಶದ ತಾಪಮಾನ ಕಡಿಮೆಗೊಳಿಸುವ ಸಾಧನ ಇದಾಗಿದೆ ಎಂದರು.
ಅಜ್ರಿ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಉಪ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಅಜ್ರಿ ಮಾತನಾಡಿ, ಇಸ್ರೋಗೆ ಕಂಪನಿಯಿಂದ ಬಿಡಿ ಭಾಗ ಪೂರೈಸುವುದು ಖುಷಿಯ ವಿಷಯವಾಗಿದೆ. ಬಾಹ್ಯಾಕಾಶದ ಪ್ರಕ್ರಿಯೆಗಳಲ್ಲಿ ಈ ಹಿಂದೆ ವಿದೇಶಗಳಿಂದ ಖರೀದಿಸುತ್ತಿದ್ದ ಹೀಟ್ ಪೈಪ್‌ಗಳನ್ನು ಬಳಸಲಾಗುತ್ತಿತ್ತು. ಪ್ರಸ್ತುತ ನಮ್ಮ ಕಂಪನಿ ಹೀಟ್‌ಪೈಪ್ ತಯಾರಿಸಿದ್ದು, ಪರೀಕ್ಷಾರ್ಥವಾಗಿ 25 ಹೀಟ್ ಪೈಪ್ ನೀಡಲಾಗಿದ್ದು, ಗುಣಮಟ್ಟದಿಂದ ಕೂಡಿದೆ ಎಂದು ಇಸ್ರೋ ತಿಳಿಸಿದೆ ಎಂದರು.
ಸ್ಯಾಟಲೈಟ್ ಕೇಂದ್ರಕ್ಕೆ ಇಂತಹ ಪೈಪ್‌ಗಳನ್ನು ಪೂರೈಸಲು ಇಸ್ರೋದಿಂದ ಅನುಮೋದನೆ ಪಡೆದ ಎರಡನೇ ಕಂಪನಿ ನಮ್ಮದಾಗಿದೆ. ಭಾರತ ದೇಶ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ನಾವು ಕೂಡ ಇಂತಹ ಒಂದು ಭಾಗವಾಗುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.