

ವಿಜಯವಾಣಿ ವಿಶೇಷ ಆನೇಕಲ್
ಆನೇಕಲ್‌ನಿಂದ ಚಂದಾಪುರದವರೆಗಿನ ಮುಖ್ಯರಸ್ತೆ ಸಂಪೂರ್ಣವಾಗಿ ಅಧ್ವಾನವಾಗಿದ್ದು, ಗುಂಡಿಗಳ ನಡುವೆ ರಸ್ತೆ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಐಟಿ ಸಿಟಿ ಹಾಗೂ ಸಿಲಿಕಾನ್ ವ್ಯಾಲಿ ಎಂದು ಕರೆಯುವ ಬೆಂಗಳೂರು ಸಮೀಪದ ಗುಂಡಿಮಯ ಈ ಮುಖ್ಯರಸ್ತೆ
ಸರಿಸುಮಾರು 13 ಕಿಮೀ ಸಂಪೂರ್ಣವಾಗಿ ಹದಗೆಟ್ಟಿದೆ. ಮೂರು ವರ್ಷಗಳಿಂದ ರಸ್ತೆ ಪರಿಸ್ಥಿತಿ ಬದಲಾಗಿಲ್ಲ. ಮಳೆ ಬಂದ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು, ಬೈಕ್ ಸವಾರರು ಬಿದ್ದು, ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕನಿಷ್ಠ ರಸ್ತೆಯಲ್ಲಿನ ಹಳ್ಳಗುಂಡಿಗಳನ್ನು ಮುಚ್ಚಿಸುವಂತಹ ಕೆಲಸ ಮಾಡುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ನಗರ ಜಿಲ್ಲೆಗೆ ಒಳಪಡುವ ಆನೇಕಲ್‌ನಿಂದ ದಿನನಿತ್ಯ ಸಾವಿರಾರು ಜನರು ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೆಂಗಳೂರಿಗೆ ಕೆಲಸ ನಿಮಿತ್ತ ವಾಹನಗಳಲ್ಲಿ ಸಂಚರಿಸುತ್ತಾರೆ. ಆದರೆ, ರಸ್ತೆಯಲ್ಲಿ ಗುಂಡಿಗಳು ಇರುವುದರಿಂದ ಸಂಚರಿಸಲು ಕಷ್ಟವಾಗುತ್ತಿದ್ದು, ಜತೆಗೆ ಗುಂಡಿಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದೆ. ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿದ್ದು, ವಿದ್ಯಾರ್ಥಿಗಳು ನಿತ್ಯವೂ ಓಡಾಡುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವರು ನಿಗದಿತ ಸಮಯಕ್ಕೆ ತಲುಪಲು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕೆಸರು, ಧೂಳಿನ ಮಜ್ಜನ: ಈ ರಸ್ತೆಯಲ್ಲಿ ಸಂಚರಿಸುವವರಿಗೆ ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಎದುರಾದರೆ, ಮಳೆ ಬಂದಾಗ ಕೆಸರು ಗದ್ದೆಯಾಗಿ ಬದಲಾಗುತ್ತದೆ. ಇದರಿಂದ ವಾಹನ ಸವಾರರು ಜೀವ ಭಯದಲ್ಲಿಯೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹದಗೆಟ್ಟ ರಸ್ತೆಯಲ್ಲಿಯೇ ಸಂಚಾರಿಸುತ್ತಾರೆ. ಆದರೆ, ಈ ಸಮಸ್ಯೆ ಸರಿಪಡಿಸುವಂತಹ ಕೆಲಸಕ್ಕೆ ಮುಂದಾಗಲಿಲ್ಲ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.