

ವಿಜಯವಾಣಿ ಸುದ್ದಿಜಾಲ ಆನೇಕಲ್
ಪಟ್ಟಣದ ಬಿದರಗೆರೆ ರಸ್ತೆಯ 20ನೇ ವಾರ್ಡ್‌ನಲ್ಲಿ ಅಣ್ಣಮ್ಮದೇವಿ ಗೆಳೆಯರ ಬಳಗದಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಅಣ್ಣಮ್ಮದೇವಿ, ಚೌಡೇಶ್ವರಿದೇವಿ ಹಾಗೂ ಮಾರಮ್ಮದೇವಿಯ ಉತ್ಸವ ಶ್ರದ್ಧಾಭಕ್ತಿಗಳಿಂದ ನೆರವೇರಿತು. ನೂರಾರು ಮಹಿಳೆಯರು ಉತ್ಸವದ ಪ್ರಯುಕ್ತ ಬೆಂಗಳೂರುನಗರ ದೇವತೆ ಅಣ್ಣಮ್ಮ ದೇವಿಯನ್ನು ಪಟ್ಟಣಕ್ಕೆ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಡೋಲು, ನಾದಸ್ವರ, ತಮಟೆ ವಾದನದೊಂದಿಗೆ ದೇವಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಸಂಪ್ರದಾಯಿಕ ಪೂಜೆ ನೆರವೇರಿಸಿ ಮಡಿಲಕ್ಕಿ ಕಟ್ಟಿ, ಸುಮಂಗಲಿಯರಿಂದ ಲಲಿತ ಸಹಸ್ರನಾಮ ನಡೆಯಿತು. ಬಳಿಕ ದೀಪೋತ್ಸವ ಮತ್ತು ಶಾಸ್ತ್ರೀಯ ಸಂಗೀತ ಆಯೋಜಿಸಲಾಗಿತ್ತು. ಡೋಲು ವಿದ್ವಾನ್ ಮುನಿರಾಜು ಮತ್ತು ತಂಡದವರು ನಾದಸ್ವರ ಕಚೇರಿ ನಡೆಸಿಕೊಟ್ಟರು. ಸೋಮವಾರ ದೇವಿಯನ್ನು ಸ್ವಸ್ಥಾನಕ್ಕೆ ಕಳುಹಿಸಿ ಕೊಡಲಾಯಿತು.
ಪುರಸಭಾ ಸದಸ್ಯೆ ಪವಿತ್ರಾ ರಘು, ಅಣ್ಣಮ್ಮದೇವಿ ಗೆಳೆಯರ ಬಳಗದ ಬಿ.ಮಂಜುನಾಥ್, ಕುಮಾರ್, ವೆಂಕಟೇಶ್, ಗಣೇಶ್, ಪ್ರದೀಪ್, ಕಿರಣ್‌ಕುಮಾರ್, ಪ್ರಶಾಂತ್, ಅಶೋಕ್, ಶ್ರೀನಿವಾಸ್ ಇದ್ದರು.