

ವಿಜಯವಾಣಿ ಸುದ್ದಿಜಾಲ ಆನೇಕಲ್
ಬಲಿಷ್ಠ ಭಾರತ ಕಟ್ಟುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ ಎಂದು ತಾಲೂಕು ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಹೇಳಿದರು.
ಮಲೇಷ್ಯಾದ ಕೌಲಲಾಂಪುರದಲ್ಲಿ ಪ್ಯಾರಾ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ ಅಂತಾರಾಷ್ಟ್ರೀಯ ಕ್ರೀಡಾಪಟು ರೇಣುಕಾ ಶ್ರೀನಿವಾಸ್ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟು ಮಾತನಾಡಿದರು.
ರೇಣುಕಾ ಶ್ರೀನಿವಾಸ್ ಅವರು ಅಂತಾರಾಷ್ಟ್ರೀಯಮಟ್ಟದಲ್ಲಿ ಆನೇಕಲ್ನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇಂಥ ಪ್ರತಿಭಾವಂತರಿಗೆ ಸರ್ಕಾರ, ಸಂಘ-ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಸರಸ್ವತಿ ಮಾತನಾಡಿ, ಅಂಗವಿಕಲ ಕ್ರೀಡಾಪಟುಗಳಿಗೆ ಹೆಚ್ಚಿನ ನೆರವು ನೀಡಿ ಸಾಧನೆ ಪ್ರೋತ್ಸಾಹಿಸಬೇಕು ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ರೇಣುಕಾ ಶ್ರೀನಿವಾಸ್ ಮಾತನಾಡಿ, ಕುಟುಂಬದ ನಿರ್ವಹಣೆಯೇ ಕಷ್ಟಕರವಾಗಿರುವ ಸಂದರ್ಭದಲ್ಲಿ ದೇಶ-ವಿದೇಶಗಳಲ್ಲಿ ಪ್ಯಾರಾ ಥ್ರೋಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆಲುವು ಪಡೆಯಲು ತಾಲೂಕಿನ ಜನತೆ ನೀಡಿರುವ ಪ್ರೋತ್ಸಾಹವೇ ಕಾರಣ ಎಂದರು.
ಮುಖಂಡರಾದ ನಾಗರಾಜ್, ಅನ್ನಪೂರ್ಣೇಶ್ವರಿ, ಭಾಗ್ಯಮ್ಮ, ರಾಮಕೃಷ್ಣಪ್ಪ, ಕಿರಣ್, ಮುನಿಯಮ್ಮ, ಮುನಿರತ್ನಮ್ಮ, ಗೌರಿ, ಚುಟುಕು ಶಂಕರ್ ಇತರರು ಇದ್ದರು.