ಜುಲೈ 21ರಿಂದ ಸೆ.18ರವರೆಗೆ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ

shri
ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ
Published on

ಪಡುಬಿದ್ರಿ: ವಿಶ್ವಬ್ರಾಹ್ಮಣರ ಕುಲಗುರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ 20ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ 2024ರ ಜುಲೈ 21ರಿಂದ ಸೆ.18ರವರೆಗೆ ಪಡುಕುತ್ಯಾರಿನ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯಲಿದೆ.

21ರಂದು ಸಮಾಜದ ಎಲ್ಲ ಹಿರಿಯ ಕಿರಿಯ ವೈದಿಕರು, ಮಠದ ವಿದ್ಯಾರ್ಥಿಗಳು, ಭಕ್ತರ ಉಪಸ್ಥಿತಿಯಲ್ಲಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ಗುರುಪಾದ ಪೂಜೆ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಧಾರ್ಮಿಕ ಸಭೆಯಲ್ಲಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಕಟಪಾಡಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರ ಹೋಬಳಿ ಅಧ್ಯಕ್ಷತೆ ವಹಿಸುವರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದ.ಕ. ಜಿಲ್ಲೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಡಿ.ಎಂ.ಶಿವಪ್ರಸನ್ನ, ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಅಧ್ಯಕ್ಷ ಎಸ್.ಆರ್.ಹರೀಶ್ ಆಚಾರ್ಯ, ಎಸ್‌ಕೆಜಿಐ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಪೆರ್ಡೂರು, ಕೆ.ವಿಶ್ವನಾಥ ರಾವ್, ಕುತ್ಯಾರು ಗ್ರಾಪಂ ಅಧ್ಯಕ್ಷ ಜನಾರ್ದನ ಆಚಾರ್ಯ ಕುತ್ಯಾರು ಭಾಗವಹಿಸುವರು.

ವಿವಿಧ ವಿಭಾಗಗಳ ಸಮಾವೇಶ

ಚಾತುರ್ಮಾಸದ ವೇಳೆ ಶ್ರೀಚಕ್ರ ಅರ್ಚನೆ, ದಶ ಸಹಸ್ರ ಮೋದಕ ಮಹಾಗಣಪತಿ ಯಾಗ, ಸಾಮೂಹಿಕ ಆಶ್ಲೇಷ ಬಲಿ ಕಾರ್ಯಕ್ರಮಗಳು ಶ್ರೀ ಸರಸ್ವತಿ ಪೂರ್ವ ಚಾತ್ರ ಸಂಘ ನೇತೃತ್ವದಲ್ಲಿ ನಡೆಯಲಿದೆ. ಚಾತುರ್ಮಾಸ್ಯದ 2 ತಿಂಗಳ ಅವಧಿಯನ್ನು ವ್ಯವಸ್ಥಿತ ನಿರ್ವಹಣೆಗಾಗಿ ಒಂದು ವಾರದಂತೆ ಮಹಾಸಂಸ್ಥಾನದ ವ್ಯಾಪ್ತಿಯ 21ದೇವಸ್ಥಾನಗಳಿಗೆ ವಿಭಜಿಸಿ ನೀಡಲಾಗಿದ್ದು, ಆಯಾ ದೇವಸ್ಥಾನದ ನೇತೃತ್ವದಲ್ಲಿ ಪ್ರತಿ ದಿನ ಭಜನೆ, ಗುರುಪಾದುಕಾ ಪೂಜೆ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿವೆ. ಪ್ರತಿ ಶನಿವಾರ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ಭಾನುವಾರ ಗಣ್ಯ ವ್ಯಕ್ತಿಗಳು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ಯುವಕರ, ಮಹಿಳೆಯರ ವೈದಿಕರ, ಸಂಘ ಸಂಸ್ಥೆಗಳ ಸೇರಿ ವಿವಿಧ ವಿಭಾಗಗಳ ಸಮಾವೇಶ ನಡೆಯಲಿವೆ ಎಂದು ಮಹಾಸಂಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net