ರಾಜ್ಯದ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ, ಆನೆಗುಡ್ಡೆ ಗಣಹೋಮದಲ್ಲಿ ಭಾಗವಹಿಸಿದ ಸಿಎಂ

anegudde
Published on

ಎರಡು ದಿನದಿಂದ ಲೋಕಕಲ್ಯಾಣ ಹಾಗೂ ರಾಜ್ಯದ ಮಳೆ, ಬೆಳೆ ಸಮೃದ್ಧಿಗಾಗಿ ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸ ಮಾಡಿದ್ದೇನೆ, ಎಲ್ಲರಿಗೂ ಒಳ್ಳೆಯದಾಗಲಿ. ರಾಜ್ಯಕ್ಕೆ ಸಮೃದ್ಧಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕುಟುಂಬಿಕರ ಜತೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಅವರು, ಸ್ನೇಹಿತ ಬೀಜಾಡಿ ರಾಘವೇಂದ್ರ ರಾವ್ ಹಾಸನ ಅವರು ಲೋಕಕಲ್ಯಾಣಾರ್ಥ ಕೈಗೊಂಡ 1008 ಕಾಯಿ ಗಣಹೋಮದಲ್ಲಿ ಪಾಲ್ಗೊಂಡರು. ಸೀತಾರಾಮ ಐತಾಳ್, ಸುಬ್ರಹ್ಮಣ್ಯ ಉಪಾಧ್ಯಾಯ, ಪ್ರಾಣೇಶ್ ತಂತ್ರಿ, ಅಸೋಡು ಶ್ರೀಧರ ಉಪಾಧ್ಯಾಯ, ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ ನೇತೃತ್ವದಲ್ಲಿ 28 ಜನ ವೈದಿಕರು ಗಣಹೋಮ ನೆರೆವೇರಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಶಾಸಕ ಜೀವರಾಜ್, ಬಿಜೆಪಿ ಮುಖಂಡರು ಇದ್ದರು. ಸಿಎಂ ಅವರನ್ನು ದೇವಸ್ಥಾನದ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಹಾಗೂ ಹಿಂದಿನ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಬರಮಾಡಿಕೊಂಡರು.

ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ: ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕರೊನಾ ಲಾಕ್‌ಡೌನ್, ಆರ್ಥಿಕ ಹಿನ್ನಡೆ ಮತ್ತಿತರ ಕಾರಣಗಳಿಂದ ಇತಿಮಿತಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ರಾಜ್ಯಕ್ಕೆ ಹಾಗೂ ಎಲ್ಲರಿಗೂ ಹಿತವಾಗುವ ಬಜೆಟ್ ಮಂಡನೆ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net