ಆಂದೋಲಾ ಶ್ರೀ, ಮುತಾಲಿಕ್‌ಗೆ ನೋಟಿಸ್; 6 ತಿಂಗಳ ಹಿಂದಿನ ಕೇಸ್​ಗೆ ಮರುಜೀವ

PH 25
Published on

ಯಡ್ರಾಮಿ: ಪಟ್ಟಣದಲ್ಲಿ 2023ರ ಜ.12ರಂದು ನಡೆದಿದ್ದ ಹಿಂದು ಸಂತ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ದೂರಿನನ್ವಯ ಆರು ತಿಂಗಳ ಬಳಿಕ (ಸೆ.1) ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರೂ ಆದ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಗೆ ಯಡ್ರಾಮಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಶಾಲೆಯೊಂದರ ಆವರಣದಲ್ಲಿ ಶ್ರೀರಾಮ ಸೇನೆಯಿಂದ ಹಿಂದು ಸಂತ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಆಂದೋಲಾ ಶ್ರೀ ಹಾಗೂ ಮುತಾಲಿಕ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದರು. ಅಲ್ಲದೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಟಿಪ್ಪು ಸುಲ್ತಾನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಜ.22ರಂದು ಇಬ್ಬರ ವಿರುದ್ಧ ಕಲಂ 298(ಎ), 505(3), 504ರಡಿ ಯಡ್ರಾಮಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ನಡೆದ ಹಲವು ತಿಂಗಳ ಬಳಿಕ ಸೆ.2ರಂದು ಠಾಣೆಗೆ ಹಾಜರಾಗುವಂತೆ ಪೊಲೀಸರು ಇಬ್ಬರಿಗೆ ನೋಟಿಸ್ ನೀಡಿದ್ದಾರೆ.

ಸುಳ್ಳು ಎಫ್‌ಐಆರ್ ಫ್ಯಾಶನ್ ಆಗಿಬಿಟ್ಟಿದೆ: ಜ.12ರಂದು ಪ್ರಕರಣ ದಾಖಲಾಗಿದ್ದು, ಆರು ತಿಂಗಳ ಬಳಿಕ ಯಡ್ರಾಮಿ ಠಾಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸುಳ್ಳು ಎಫ್‌ಐಆರ್ ದಾಖಲಿಸುವುದು ಫ್ಯಾಶನ್ ಆಗಿಬಿಟ್ಟಿದೆ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ಗುಡುಗಿದರು. ದೂರು ದಾಖಲಾದ ಕೆಲವೇ ದಿನಗಳಲ್ಲಿ ನೋಟಿಸ್ ಬರುವುದು ಸಾಮಾನ್ಯ. ಆದರೆ ನಮಗೆ ಈಗ ಬಂದಿದೆ. ಉತ್ತರ ಕೊಡುವುದು ನಮ್ಮ ಕರ್ತವ್ಯ. ತಪ್ಪು ತಿಳಿವಳಿಕೆಯಿಂದ ನಮ್ಮ ವಿರುದ್ಧ ದೂರು ನೀಡಿದ್ದು, ನಮ್ಮ ಭಾಷಣದ ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿದ್ದಕ್ಕಾಗಿ ನೋಟಿಸ್ ಕೊಟ್ಟಿದ್ದು, ಉತ್ತರಿಸುತ್ತೇವೆ. ಪೊಲೀಸರು ಸಚಿವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ನಾವು ನೀಡಿದ ದೂರುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ವಿರೋಧಿಗಳು ದೂರು ನೀಡಿದರೆ ತಕ್ಷಣ ನಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತದೆ. ಈ ತಾರತಮ್ಯ ಏಕೆ ಎಂಬುದೇ ತಿಳಿಯುತ್ತಿಲ್ಲ.
| ಶ್ರೀ ಸಿದ್ಧಲಿಂಗ ಸ್ವಾಮೀಜಿ,
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net