ಆಂಧ್ರದ ಆಕ್ಷೇಪಣೆ ಆಧಾರ ರಹಿತ

KODANDARAMAIAH P-05
Published on

ಚಿತ್ರದುರ್ಗ: ತುಮಕೂರು, ಚಿತ್ರದುರ್ಗ, ಕೋಲಾರ ಪ್ರದೇಶದ ಬರಡು ಭೂಮಿ ಜನರ ಬದುಕಿನಲ್ಲಿ ಆಶಾಭಾವನೆ ಮೂಡಿಸಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಈಚೆಗೆ ಆಂಧ್ರದ ಒಂದಿಬ್ಬರು ರಾಜಕಾರಣಿಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಖಂಡನೆ ವ್ಯಕ್ತಪಡಿಸಿದೆ.

ಈ ಸಂಬಂಧ ಸೋಮವಾರ ಹೇಳಿಕೆ ನೀಡಿರುವ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಭದ್ರಾ ಯೋಜನೆಯು ಆಂಧ್ರಪ್ರದೇಶಕ್ಕೆ ನೀರಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಾಗಿ ಕೆಲವರ ಆರೋಪ ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ 1 ಮತ್ತು 2 ಶಿಫಾರಸುಗಳ ಪ್ರಕಾರ ಮತ್ತು ನಿಗದಿಪಡಿಸಿದ ಜಿಲ್ಲೆಗಳ ಪಾಲಿನ ನೀರಿನ ಬಳಕೆಗೆ ಯೋಜನೆ ರೂಪುಗೊಂಡಿದೆ. ಈ ಹಿಂದೆ ನಾವು ಇನ್ನೂ ಬಳಸದ ಪಾಲನ್ನು ಶಾಶ್ವತ ಆಧಾರದ ಮೇಲೆ ನಿಯೋಜಿಸಲು ಆಂಧ್ರಪ್ರದೇಶ ಸರ್ಕಾರ ಒತ್ತಾಯ ವ್ಯಕ್ತಪಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ದುರಾಸೆ ಸರಿಯಲ್ಲ ಎಂದು ಬೇಡಿಕೆ ತಿರಸ್ಕರಿಸಿತ್ತು ಎಂದು ತಿಳಿಸಿದ್ದಾರೆ.

ಆಯೋಗ 1 ಮತ್ತು 2 ವರದಿಯನ್ನು ಆಂಧ್ರ, ಕರ್ನಾಟಕ, ಮಹಾರಾಷ್ಟ ಮೂರು ರಾಜ್ಯಗಳ ಸರ್ಕಾರ ಕೂಡ ಒಪ್ಪಿಕೊಂಡಿವೆ. ಆಯೋಗ 1 ಮತ್ತು 2 ತೀರ್ಪು ಪ್ರಕಾರ ಯಾವ ಪ್ರದೇಶದ ನೀರನ್ನು ಕಡಿತ ಮಾಡದೆ ಕರ್ನಾಟಕ ಸರ್ಕಾರ ಯೋಜನೆ ಜಾರಿಗೊಳಿಸಿದೆ. ನಮಗೆ ಮೀಸಲಿಟ್ಟ 30 ಟಿಎಂಸಿ ಅಡಿ ನೀರನ್ನು ಮಾತ್ರ ಬಳಸಿಕೊಳ್ಳುವುದು ಭದ್ರಾ ಮೇಲ್ದಂಡೆ ಯೋಜನೆ ಗುರಿಯಾಗಿದೆ. ಆಯೋಗದ ತೀರ್ಪನ್ನು ಸ್ವತಹ ಆಂಧ್ರ ಸರ್ಕಾರ ಒಪ್ಪಿಕೊಂಡಿದೆ ಎಂಬ ಸತ್ಯವನ್ನು ಆಕ್ಷೇಪ ವ್ಯಕ್ತಪಡಿಸಿರುವವರು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಅನಂತಪುರದ ಮಾಜಿ ಶಾಸಕ ರಾಮಕೃಷ್ಣ ನೇತೃತ್ವದ ಸಿಪಿಎಂ ನಾಯಕರ ನಿಯೋಗ ತುಂಗಾ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿರುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಅವರ ಅಧ್ಯಯನಕ್ಕೂ ಬೆಂಬಲ ಇದೆ. ಆದರೆ, ವಾಸ್ತವತೆ ತಿಳಿದುಕೊಳ್ಳದೆ, ಅಧ್ಯಯನ ಮಾಡದೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net