ಅಧಿಕ ತೇವಾಂಶದಿಂದ ಬಿತ್ತನೆ ಆಲೂ ನಾಶ

7HSN1
Published on

ಹಾಸನ: ಭೂಮಿಯಲ್ಲಿನ ಅಧಿಕ ತೇವಾಂಶ ಹಾಗೂ ಎರಿವಿನಿಯಾ ಎಂಬ ಹುಳುವಿನ ಬಾಧೆಯಿಂದ ಬಿತ್ತನೆ ಆಲೂಗಡ್ಡೆ ಜಮೀನಿನಲ್ಲೇ ಕೊಳೆಯುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.


ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಆಲೂಗಡ್ಡೆ ಈ ಬಾರಿ ಆರಂಭದಲ್ಲೇ ಕೈ ಕೊಟ್ಟಿದೆ. ಬಿತ್ತನೆ ಮಾಡಿ 12 ದಿನ ಕಳೆದರೂ ಚಿಗುರು ಒಡೆಯದೆ ಭೂಮಿಯಲ್ಲೇ ಕೊಳೆಯುವುದನ್ನು ಅರಿತ ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದ್ದು ಸೋಮವಾರ ಜಿಲ್ಲಾಧಿಕಾರಿಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ.


ತೇವಾಂಶದಲ್ಲೇ ಬಿತ್ತನೆ: ಮಾರುಕಟ್ಟೆಯಿಂದ ಆಲೂಗಡ್ಡೆ ತರುವ ಬೆಳೆಗಾರರು ಸುಮಾರು 15 ದಿನ ಮನೆಯಲ್ಲೇ ಬೀಜೋಪಚಾರ ಮಾಡಬೇಕು. ಮೊಳಕೆ ಬಂದ ಮೇಲೆ ಕತ್ತರಿಸಿ ಬಿತ್ತನೆ ಮಾಡಬೇಕು. ಆದರೆ ಈ ವರ್ಷ ರೈತರು ಈ ವಿಚಾರದಲ್ಲಿ ತರಾತುರಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಬೀಜೋಪಚಾರಕ್ಕೆ ಸಮಯ ನೀಡದೆ ಮಳೆಯಾಗುತ್ತಿದ್ದಂತೆ ಬಿತ್ತನೆ ಮಾಡಿದ್ದಾರೆ. ನಂತರ ಒಂದೆರಡು ಜೋರು ಮಳೆಯಾದ ಹಿನ್ನೆಲೆಯಲ್ಲಿ ಆಲೂಗಡ್ಡೆಗೆ ಶಿಲೀಂದ್ರ ಅಂಟಿಕೊಂಡು ಬೆಳೆಯಲು ಬಿಟ್ಟಿಲ್ಲ. ಹೆಚ್ಚಿನ ತೇವಾಂಶ ಹಾಗೂ ಶಿಲೀಂದ್ರಗಳು ಆಲೂಗಡ್ಡೆಯನ್ನು ನಾಶಪಡಿಸಿವೆ. ಹೀಗಾಗಿ ಬಿತ್ತನೆ ಬೀಜ ಭೂಮಿಯಲ್ಲೇ ಕೊಳೆಯುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಎರಿವಿನಿಯಾ ಬ್ಯಾಕ್ಟಿರಿಯಾ: ಆಲೂಗಡ್ಡೆಗೆ ಈ ಬಾರಿ ಎರಿವಿನಯಾ ಬ್ಯಾಕ್ಟಿರಿಯಾ ಲಗ್ಗೆ ಇಟ್ಟಿವೆ. ಅಂಗಮಾರಿ ರೋಗದಿಂದ ಮಾತ್ರ ಹಾಳಾಗುತ್ತಿದ್ದ ಆಲೂಗೆ ಹೊಸ ಬ್ಯಾಕ್ಟೀರಿಯಾ ಜೋತು ಬಿದ್ದಿದ್ದು, ಭೂಮಿಯಲ್ಲೇ ಬೀಜ ಕೊಳೆಯಲು ಅದೂ ಕಾರಣವಾಗಿದೆ. ಅರಕಲಗೂಡು ತಾಲೂಕಿನಲ್ಲಿ ಹೆಚ್ಚು ಮಳೆಯಾಗಿಲ್ಲವಾದರೂ ಆಲೂಗಡ್ಡೆ ಕೊಳೆಯುತ್ತಿದೆ. ಇದಕ್ಕೆ ಬ್ಯಾಕ್ಟೀರಿಯಾಗಳೇ ಕಾರಣ ಎನ್ನಲಾಗಿದೆ.


ಕಡಿಮೆ ಉಷ್ಣಾಂಶ ಬೇಕು: ಆಲೂಗಡ್ಡೆ ಬಿತ್ತನೆಗೆ 10ರಿಂದ 12 ಡಿಗ್ರಿ ಉಷ್ಣಾಂಶ ಮಾತ್ರ ಬೇಕಾಗುತ್ತದೆ. ಆದರೆ ಹಾಸನ ಸೇರಿ ಪಕ್ಕದ ಜಿಲ್ಲೆಗಳಲ್ಲಿ 25ರಿಂದ 27ರ ವರೆಗೆ ಉಷ್ಣಾಂಶ ದಾಖಲಾಗುವುದರಿಂದ ಗುಣಮಟ್ಟದ ಆಲೂಗಡ್ಡೆ ಬಿತ್ತನೆ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ತಾಲೂಕಿನ ಸೋಮನಹಳ್ಳಿ ಕಾವಲಿನಲ್ಲಿ ಕೀಟ ಪರದೆಗಳನ್ನು ಅಳವಡಿಸಿ ದೃಢೀಕೃತ ಆಲೂಗಡ್ಡೆ ಬಿತ್ತನೆಗೆ ಕ್ರಮ ಕೈಗೊಳ್ಳಲಾಗಿದೆ. ಔಷಧೋಪಚಾರ, ಉತ್ತಮ ವಾತಾವರಣ ಹಾಗೂ ಫಲವತ್ತಾದ ಭೂಮಿಯಿದ್ದರೆ ಒಂದು ಕೆ.ಜಿ.ಆಲೂಗಡ್ಡೆಗೆ 10 ಕೆ.ಜಿ.ಇಳುವರಿ ಪಡೆಯಬಹುದು.


ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ವಿಜ್ಞಾನಿಗಳು ವಿವಿಧ ಪ್ರಯೋಗ ಕೈಗೊಂಡಿದ್ದು ’ಬ್ರೀಡರ್ ಸೀಡ್ಸ್’ (ದೃಢೀಕೃತ ಆಲೂಗಡ್ಡೆ) ಬೆಳೆಗೆ ಮುಂದಾಗಿದ್ದಾರೆ.


ಈಗಾಗಲೇ ಹಾಸನ ತಾಲೂಕು, ಆಲೂರು ಭಾಗ ಹಾಗೂ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ, ಕಳಸ, ತರಿಕೇರೆ ಹಾಗೂ ಲಿಂಗದಹಳ್ಳಿ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಿರುವ ವಿಜ್ಞಾನಿಗಳು, ಬ್ರೀಡರ್ ಸೀಡ್ಸ್ ಬೆಳೆಗೆ ಕ್ರಮ ಕೈಗೊಂಡಿದ್ದರು. ಆದರೆ ಕರೊನಾ ಲಾಕ್‌ಡೌನ್‌ನಿಂದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದ್ದು ಆಲೂಗಡ್ಡೆ ಬೆಳೆಗಾರರಿಗೆ ಆಸರೆಯಾಗುತ್ತದೆ ಎಂಬ ವಿಶ್ವಾಸವಿದೆ.


ಪ್ರೋತ್ಸಾಹ ಧನಕ್ಕೆ ಆಗ್ರಹ: ಆಲೂಗಡ್ಡೆ ಬಿತ್ತನೆಗಾಗಿ ಎಕರೆಗೆ ಸುಮಾರು 35ರಿಂದ 40 ಸಾವಿರ ರೂ.ಖರ್ಚು ಮಾಡಿ ಕೈ ಸುಟ್ಟುಕೊಂಡಿರುವ ಬೆಳೆಗಾರರಿಗೆ ಪ್ರೋತ್ಸಾಹ ಧನ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ. 40 ವರ್ಷದಿಂದ ಆಲೂಗಡ್ಡೆಯನ್ನೇ ಬಿತ್ತನೆ ಮಾಡಿಕೊಂಡಿರುವ ಪರಿಣಾಮ ಮುಂಗಾರು ಆಲೂಗಡ್ಡೆಯಿಂದಲೇ ಪ್ರಾರಂಭವಾಗುತ್ತದೆ. ಆದರೆ ಆಲೂ ಭೂಮಿಯಲ್ಲೇ ಕೊಳೆತು ಸಾಕಷ್ಟು ನಷ್ಟವುಂಟು ಮಾಡಿದೆ. ಕಳೆದ ವರ್ಷದಂತೆ ಈಗಲೂ ಎಕರೆಗೆ 15 ಸಾವಿರ ರೂ.ಪ್ರೋತ್ಸಾಹ ಧನ ನೀಡಬೇಕೆಂದು ಹಾಸನ ತಾಲೂಕು ಸಿಂಗಪಟ್ಟಣ ರೈತ ನಾಗರಾಜ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net