

ಉಡುಪಿ: ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದಿಂದ ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ 12ನೇ ಶತಮಾನಕ್ಕೆ ಸೇರಿದ ವಿಷ್ಣುಮೂರ್ತಿ ಶಿಲ್ಪ ಉಡುಪಿ ತಾಲೂಕಿನ ಬಡಗಬೆಟ್ಟು ಪಂಚಾಯಿತಿಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಪಾಳು ಬಿದ್ದ ದೇಗುಲದ ಪಕ್ಕ ಪಾಳುಬಾವಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ, ಶಿಲ್ಪದ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈ ಸೊಂಟದ ಮೇಲಿದ್ದು, ತುಂಡಾದ ಗದೆ ದೊರೆತಿದೆ. ಬಲ ಹಿಂಬದಿಯ ಕೈ ಭಾಗ ಸಹ ತುಂಡಾಗಿದ್ದು ಅದು ಇನ್ನು ದೊರೆತಿಲ್ಲ. ಎಡ ಹಿಂಬದಿಯ ಕೈಯಲ್ಲಿ ಶಂಖವಿದೆ. ಕಿವಿಯಲ್ಲಿ ಮಕರ ಕುಂಡಲವಿದೆ. ಕೊರಳಲ್ಲಿ ಕಂಠಾಭರಣ, ಉಪವೀತ, ಉದರಾಭರಣ, ಹಾಗು ಮೊಳಕಾಲಿನವರೆಗೆ ಇಳಿಬಿದ್ದ ಕೌಸ್ತುಭ ಹಾರವಿದೆ. ಚಿತ್ತಾಕರ್ಷಕ ಈ ಶಿಲ್ಪ ಕರಂಡ ಮುಕಟಧಾರಿಯಾಗಿದ್ದು, ತೋಳಲ್ಲಿ ತೋಳ್ಬಂದಿ, ಕಡಗಗಳಿಂದ ಸಿಂಗರಿಸಲ್ಪಟ್ಟಿದೆ. ಸೊಂಟಪಟ್ಟಿ, ಸೊಂಟದ ಕೆಳಭಾಗದಲ್ಲಿ ವಸ್ತ್ರ, ವಡ್ಯಾಣಗಳಿವೆ. ಪಾದಗಳು ತುಂಡಾಗಿದ್ದು, ತುಂಡಾದ ಪಾದದ ಭಾಗಗಳು ಪಾಳು ಬಿದ್ದ ದೇವಾಲಯದ ಗರ್ಭಗುಡಿಯಲ್ಲಿ ಪಾಣಿ ಪೀಠದಲ್ಲಿವೆ. ಮುಕುಟದ ಹಿಂಭಾಗದಲ್ಲಿ ಪ್ರಭಾವಳಿಯಿದೆ. ಮೂರ್ತಿಯು 4 ಅಡಿ ಎತ್ತರವಿದೆ. ಶಿಲ್ಪದ ಶೈಲಿ ಮತ್ತು ಲಕ್ಷಣದ ಆಧಾರದ ಮೇಲೆ ಈ ಶಿಲ್ಪವನ್ನು 12-13ನೇ ಶತಮಾನದ ಶಿಲ್ಪವೆಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಶೋಧನೆಯಲ್ಲಿ ಅಂತಿಮ ಬಿ.ಎ. ಪುರಾತತ್ವ ವಿಭಾಗದ ಕಾವ್ಯಾ, ಭವ್ಯಾ, ಶ್ರೇಯಸ್, ನಾಗರಾಜ, ರಾಜೇಶ್, ಗೌತಮ್, ಸ್ಥಳೀಯರಾದ ಗಣೇಶ್ ಆಚಾರ್ಯ ಮತ್ತು ಗಣೇಶ್ ಸರಳೇಬೆಟ್ಟು ಸಹಕರಿಸಿದ್ದಾರೆ.