ಕೃಷ್ಣಾ ನದಿಯಲ್ಲಿ ಪುರಾತನ ವಿಷ್ಣು ಮೂರ್ತಿ ಪತ್ತೆ

06-02-Shiva-1
ರಾಯಚೂರು ತಾಲೂಕಿನ ದೇವಸುಗೂರು ಹತ್ತಿರದ ಕೃಷ್ಣಾ ನದಿಯಲ್ಲಿ ದೊರೆತಿರುವ ಅಯೋಧ್ಯೆ ಬಾಲರಾಮನ ಮೂರ್ತಿಯ ಹೊಲಿಕೆಯಿರುವ ವಿಷ್ಣುವಿನ ಮೂರ್ತಿ.
Published on

ರಾಯಚೂರು: ತಾಲೂಕಿನ ದೇವಸುಗೂರು ಹತ್ತಿರದ ಕೃಷ್ಣಾ ನದಿಯಲ್ಲಿ ಅಯೋಧ್ಯೆ ಬಾಲ ರಾಮನ ಮೂರ್ತಿಯನ್ನು ಹೋಲುವ ಪುರಾತನ ವಿಗ್ರಹ ಮತ್ತು ಶಿವಲಿಂಗ ಸೋಮವಾರ ಪತ್ತೆಯಾಗಿವೆ.
ನದಿಯಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜೆಸಿಬಿಯಿಂದ ಮಣ್ಣು ಅಗೆಯುವ ಸಂದರ್ಭದಲ್ಲಿ ಮೂರ್ತಿಗಳು ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಮೀನುಗಾರರು ಮೂರ್ತಿಗಳನ್ನು ನದಿ ದಡಕ್ಕೆ ತಂದು ಸುರಕ್ಷಿತ ಸ್ಥಳದಲ್ಲಿಟ್ಟಿದ್ದಾರೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲ ರಾಮನ ಮೂರ್ತಿಗೂ ವಿಷ್ಣುವಿನ ದಶವತಾರದ ಮೂರ್ತಿಗೆ ಸಾಮ್ಯತೆ ಕಂಡು ಬರುತ್ತಿದೆ. ಮೂರ್ತಿಗಳು ಬಹುತೇಕ 12ನೇ ಶತಮಾನಕ್ಕೆ ಸೇರಿದ ವಿಜಯನಗರ ಅರಸರ ಕಾಲಕ್ಕಿಂತ ಹಿಂದಿನದಿರಬೇಕು ಎಂದು ಅಂದಾಜಿಸಲಾಗುತ್ತಿದೆ.
ಮೂರ್ತಿಯ ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ. ವರಹಾ, ವಾಮನ ಅವತಾರಗಳು ಸ್ಪಷ್ಟವಾಗಿ ಕಾಣುತ್ತಿವೆ. ಕೆಳಗಡೆ ಗರುಡ ವಾಹನವನ್ನು ಕೆತ್ತನೆ ಮಾಡಲಾಗಿದೆ. ಹಸಿರು ಮಿಶ್ರಿತ ಗ್ರಾನೈಟ್ ಶಿಲೆಯಲ್ಲಿ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ.
ಮೂರ್ತಿಗಳು ಭಗ್ನಗೊಂಡ ನಂತರದಲ್ಲಿ ಮೂರ್ತಿಗಳನ್ನು ನದಿಯಲ್ಲಿ ವಿಸರ್ಜನೆ ಮಾಡಿರಬಹುದು, ಇಲ್ಲವೇ ನದಿ ದಂಡೆಯಲ್ಲಿ ಹಿಂದೆ ದೇವಸ್ಥಾನ ಇರಬಹುದು ಎನ್ನುವ ಅಭಿಪ್ರಾಯ ಇತಿಹಾಸ ತಜ್ಞರಿಂದ ಕೇಳಿ ಬರುತ್ತಿದೆ. ಅಯೋಧ್ಯೆ ಬಾಲರಾಮನ ಮೂರ್ತಿಗೆ ದೊರೆತಿರುವ ವಿಷ್ಣುವಿನ ಮೂರ್ತಿಗೂ ಹೆಚ್ಚಿನ ಸಾಮ್ಯತೆ ಕಂಡು ಬರುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net