

ಸಂತೋಷ ಮುರಡಿ ಮುಂಡರಗಿ
ತಾಲೂಕಿನ ಹಲವಾರು ಪ್ರಾಚೀನ ದೇವಾಲಯಗಳು ಅವಸಾನದ ಅಂಚಿನಲ್ಲಿವೆ. ಅದರಲ್ಲೂ ಕಲ್ಯಾಣ ಚಾಲುಕ್ಯ ಶೈಲಿಯ ಬಹುತೇಕ ದೇಗುಲಗಳು ಕಣ್ಮರೆಯಾಗುವ ಹಂತಕ್ಕೆ ತಲುಪಿದ್ದು ಭಕ್ತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಕಕ್ಕೂರ ಮಲ್ಲಿಕಾರ್ಜುನ, ಕೊರ್ಲಹಳ್ಳಿ ವರಹ, ಈಶ್ವರ, ಡೋಣಿಯ ಬೆಂಕೀಶ್ವರ, ಡೋಣಿಕವ್ವೆ, ಜಂತ್ಲಿಶಿರೂರ ಈಶ್ವರ, ಹಿರೇವಡ್ಡಟ್ಟಿ ಕಲ್ಮೇಶ್ವರ, ಬಳ್ಳೇಶ್ವರ, ಸೋಮೇಶ್ವರ, ತಾಮ್ರಗುಂಡಿಯ ಕಲ್ಲೇಶ್ವರ, ನಾಗರಹಳ್ಳಿ ಪಂಚಲಿಂಗೇಶ್ವರ, ಬರದೂರ ಭರತೇಶ್ವರ, ಬಿದರಳ್ಳಿ ಗಣಪತಿ, ಸೋಮೇಶ್ವರ, ಬೂದಿಹಾಳ ಈಶ್ವರ, ಮುಂಡರಗಿ ಮಲ್ಲಿಕಾರ್ಜುನ, ಮೇವುಂಡಿ ವೆಂಕಟೇಶ್ವರ, ನೀಲಕಂಠೇಶ್ವರ, ಈಶ್ವರ, ದಿಡೇಶ್ವರ ಹಾಗೂ ಕುಪ್ಪೇಶ್ವರ, ಶಿಂಗಟಾಲೂರ ಕಲ್ಮೇಶ್ವರ, ಮೊದಲಾದ ದೇವಾಲಯಗಳು ಅವಸಾನದಂಚಿನಲ್ಲಿದ್ದು, ಜೀಣೋದ್ಧಾರದ ಅಗತ್ಯವಿದೆ.
ಹಲವು ದೇವಾಲಯಗಳು, ದೇವರ ಮೂರ್ತಿಗಳು, ಶಾಸನಗಳು, ನಂದಿ ವಿಗ್ರಹ ಸುಂದರ ಕಲ್ಲಿನ ಕಂಬಳಗಳು ಮನಸೂರೆಗೊಳ್ಳುತ್ತಿವೆ. ಹಲವು ದೇವಾಲಯಗಳ ಕಟ್ಟಡ ಸಂಪೂರ್ಣ ದುಸ್ಥಿಯಲ್ಲಿವೆ. ಕೊರ್ಲಹಳ್ಳಿ ತುಂಗಭದ್ರಾ ನದಿ ದಡದಲ್ಲಿರುವ ವರಹಾ ದೇಗುಲ ನದಿ ನೀರಿನಿಂದ ಮುಳುಗಡೆಯಾಗಿದೆ. ಹಿಂದೆ ನಡೆಯುತ್ತಿದ್ದ ಧಾರ್ವಿುಕ ಕೈಂಕರ್ಯಗಳ ಕಳೆ ಇಲ್ಲದೆ ಭಣಗುಡುತ್ತಿವೆ. ಕೆಲ ದೇವಾಲಯಗಳಲ್ಲಿ ಮಾತ್ರ ಭಕ್ತರಿಂದ ಪೂಜೆ ನೆರವೇರಿಸಲಾಗುತ್ತದೆ.
ಶಿಂಗಟಾಲೂರ ಕಲ್ಮೇಶ್ವರ, ನಾಗರಹಳ್ಳಿ ಪಂಚಲಿಂಗೇಶ್ವರ, ಕೊರ್ಲಹಳ್ಳಿ ಈಶ್ವರ, ವರಹಾ, ಬಿದರಳ್ಳಿ ಸೋಮೇಶ್ವರ ಮೊದಲಾದ ದೇವಾಲಯಗಳನ್ನು ಜಕಣಾಚಾರಿ ನಿರ್ವಿುಸಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ಕೆಲ ದೇವಾಲಯಗಳಲ್ಲಿ ಶಿಲಾಶಾಸನಗಳು ಇತಿಹಾಸ ತಜ್ಞರನ್ನು ತನ್ನತ್ತ ಕರೆಯುತ್ತಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆದರೆ ಇತಿಹಾಸದ ಮೇಲೆ ಬೆಳಕು ಚೆಲ್ಲಿದಂತಾಗಿ ಅನೇಕ ಸಂಗತಿಗಳು ಬೆಳಕಿಗೆ ಬರಲಿವೆ ಎನ್ನುತ್ತಾರೆ ಊರಿನ ಹಿರಿಯರು.
ಅವಸಾನದಂಚಿನಲ್ಲಿರುವ ಪ್ರಾಚೀನ ದೇವಾಲಯಗಳಿಗೆ ಸರ್ಕಾರ ಕಾಯಕಲ್ಪ ನೀಡಬೇಕು. ಹಿಂದಿನ ಕಾಲದ ಶಿಲ್ಪಕಲಾ ವೈಭವ ಮರುಕಳಿಸಬೇಕು. ಇದಕ್ಕೆ ಸಂಬಂಧಿಸಿದ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಯು ದೇಗುಲಗಳ ಜೀಣೋದ್ಧಾರ ಮಾಡುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕಿದೆ.
ಪ್ರಾಚೀನ ಕಾಲದ ಈ ದೇವಾಲಯಗಳು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೊಳಪಟ್ಟಿಲ್ಲ. ಹೀಗಾಗಿ ಅವಸಾನದಂಚಿನಲ್ಲಿರುವ ಈ ದೇವಾಲಯಗಳನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಅಧೀನಕ್ಕೆ ಪಡೆದು ಜೀಣೋದ್ಧಾರಗೊಳಿಸಬೇಕು ಎಂಬುದು ಭಕ್ತರು ಮತ್ತು ಇತಿಹಾಸ ಸಂಶೋಧಕರು ಒತ್ತಾಯಿಸಿದ್ದಾರೆ.
ಪ್ರಾಚೀನ ಸ್ಮಾರಕಗಳು ನಮ್ಮ ಅತ್ಯಮೂಲ್ಯ ಆಸ್ತಿ. ಐತಿಹಾಸಿಕ ಪರಂಪರೆಯನ್ನು ಅರಿಯಲು ಇರುವಂತಹ ಮಹತ್ವದ ಪುರಾವೆಗಳು, ಆಕರಗಳು ಇವಾಗಿದ್ದು, ಪ್ರಾಚ್ಯವಸ್ತು ಇಲಾಖೆ ಇವುಗಳನ್ನು ಸಂರಕ್ಷಿಸಬೇಕು. ಹಲವು ದೇವಾಲಯ, ಶಾಸನ, ಕೋಟೆಗಳನ್ನು ಇಲಾಖೆಯು ಸಂರಕ್ಷಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು. ಇದರೊಟ್ಟಿಗೆ ತಾಳೆಗರಿಗಳು, ಹಳೆಯ ಕಾಲಘಟ್ಟದ ಹಸ್ತಪ್ರತಿಗಳು, ನಾಣ್ಯಗಳೂ ಕೂಡ ಸಂಗ್ರಹಿಸಲ್ಪಟ್ಟು ಅಧ್ಯಯನದ ಆಕರಗಳಾಗಿ ಬಳಸಿಕೊಳ್ಳಲು ಅವಕಾಶ ಸಿಗುವಂತಾಗಬೇಕು. -ಡಾ.ನಿಂಗು ಸೊಲಗಿ. ಸಾಹಿತಿ ಮುಂಡರಗಿ.
ಪ್ರಾಚೀನ ದೇವಾಲಯಗಳು ಅವಸಾನದಲ್ಲಿರುವ ಕುರಿತು ಮೇಲಧಿಕಾರಿಗಳ ಅವರ ಗಮನಕ್ಕೆ ತರಲಾಗುವುದು. ಸ್ಥಳೀಯರು ದೇವಾಲಗಳ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಆಸಕ್ತಿ ತೋರಿದರೆ, ಸ್ಥಳೀಯರ ಹಾಗೂ ಧರ್ಮಸ್ಥಳದ ಧಮೋಸ್ಥಾನ ಟ್ರಸ್ಟ್ನ ಸಹಕಾರದಿಂದ ಇಲಾಖೆಯು ದೇವಾಲಯಗಳ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗುತ್ತದೆ. -ರಾಜಾರಾಮ್ ಬಿ.ಸಿ., ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಗದಗ.