ದೇವಾಲಯದ ಸಮಗ್ರ ಇತಿಹಾಸ ತಿಳಿಸಿ: ವಾಗ್ಮಿ ಹಿರೇಮಗಳೂರು ಕಣ್ಣನ್ ಸಲಹೆ

Ancient Temples of Srirangapatna book launch
Published on

ಮಂಡ್ಯ: ದೇವಾಲಯಗಳು ಸಾಂಸ್ಕೃತಿಕ ಕೇಂದ್ರ. ಆದ್ದರಿಂದ ಅವುಗಳನ್ನು ಪುರಾಣವನ್ನಾಗಿ ಮಾಡದೇ ಇತಿಹಾಸವನ್ನಾಗಿಸಬೇಕು. ಜತೆಗೆ ಜನಸಾಮಾನ್ಯರಿಗೆ ಪರಿಚಯಿಸಿ ಸುಮಧುರ ತಾಣವನ್ನಾಗಿ ಮಾಡಬೇಕಾಗಿದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಸಲಹೆ ನೀಡಿದರು.

ನಗರದ ಹರ್ಡೀಕರ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತ ಗಣಂಗೂರು ನಂಜೇಗೌಡ ಬರೆದಿರುವ ‘ಶ್ರೀರಂಗಪಟ್ಟಣದ ಪ್ರಾಚೀನ ದೇಗುಲಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ದೇವಾಲಯಗಳ ಎದುರು ಮಾಹಿತಿಯ ಫಲಕಗಳನ್ನು ಹಾಕಬೇಕು. ಅದರ ಸುತ್ತಳತೆ, ವಿನ್ಯಾಸ, ನಿರ್ಮಾಣದ ಮಾಹಿತಿ, ಪೂಜೆ ಪುನಸ್ಕಾರದ ಜತೆಗೆ ಸಮಗ್ರ ಇತಿಹಾಸವುಳ್ಳ ಕೈಪಿಡಿಯನ್ನು ನೀಡಬೇಕು. ಪ್ರಮುಖವಾಗಿ ದೇವಾಲಯದ ಸುತ್ತಲೂ ಏನಿರಬೇಕು, ಏನಿರಬಾರದು ಎಂಬುದನ್ನು ತಿಳಿಸಬೇಕಾಗಿದೆ ಎಂದರು.

ದೇವಾಲಯಗಳಿಗೆ ಚಿನ್ನಾಭರಣಗಳನ್ನು ನೀಡಿದರೆ ಸಾಲದು. ಬದಲಾಗಿ ಆವರಣದಲ್ಲಿ ಸುಂದರ ಉದ್ಯಾನ, ವೈದ್ಯಕೀಯ ಕೇಂದ್ರ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಸೇವಕನನ್ನು ನೇಮಿಸಿ ಉದ್ಯೋಗ ನೀಡುವ ಕೆಲಸ ಆಗಬೇಕು. ತಮಿಳುನಾಡಿನ ಪ್ರಾಚೀನ ದೇಗುಲ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಮಾಹಿತಿಯುಳ್ಳ ಪುಸ್ತಕ ಪ್ರಕಟಿಸಿದೆ. ಆದರೆ ಕರ್ನಾಟಕದ ದೇವಾಲಯ ಕುರಿತು ಮಾಹಿತಿ ಪ್ರಕಟಿಸಿಲ್ಲ. ದೇವಾಲಯಗಳು ಸಂಸ್ಕೃತಿ ಬಿಂಬಿಸಲಿದ್ದು, ಕೆಲವೆಡೆ ದೇವಾಲಯದ ಪಳೆಯುಳಿಕೆ ಮಾತ್ರ ಉಳಿದಿವೆ. ಹಾಗಾಗಿ ದೇವಾಲಯಗಳ ಕುರಿತು ಮಾಹಿತಿ ಪುಸ್ತಕಗಳು ಹೆಚ್ಚಿನದಾಗಿ ಹೊರ ಹೊಮ್ಮಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ಪಾರಂಪರಿಕ ನಗರಿ. ಅಲ್ಲಿನ ಪ್ರಾಚೀನ ದೇಗುಲಗಳ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಿರುವುದು ಒಳ್ಳೆಯ ಬೆಳವಣಿಗೆ. ವಿಷಯ ಸಂಗ್ರಹಿಸಿ ಪುಸ್ತಕ ಬರೆಯುವುದು ಸುಲಭವಲ್ಲ. ಅದಕ್ಕೆ ಸತತ ಪರಿಶ್ರಮ ಬೇಕು. ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಹೊರ ತೆಗೆಯುವ ಕೆಲಸ ಮಾಡಬೇಕಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪುಸ್ತಕ ಕುರಿತು ಮಾತನಾಡಿದರು. ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಚಿಂತಕಿ ನಾಗಶ್ರೀ ತ್ಯಾಗರಾಜು, ಪತ್ರಕರ್ತ ಗಣಂಗೂರು ನಂಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net