

ಮೈಸೂರು: ಸಂಸ್ಕೃತ ಮತ್ತು ಪ್ರಾಕೃತ ಸಾಹಿತ್ಯದಲ್ಲಿ ಕಾವ್ಯ ಮೀಮಾಂಸೆಯ ಚಿಂತನೆಗಳು ಇರುವಂತೆ ಕನ್ನಡ ಕಾವ್ಯಲೋಕದಲ್ಲಿ ಮೀಮಾಂಸೆಯ ಒಳನೋಟಗಳು ಇವೆ ಎಂದು ಕನ್ನಡ ಪ್ರಾಧ್ಯಾಪಕ ಡಾ.ಹೊಂಬಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿರುವ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್) ಆವರಣದಲ್ಲಿ ಏರ್ಪಡಿಸಿದ್ದ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನದ ಮೊದಲ ಪ್ರಬಂಧ ಗೋಷ್ಠಿಯಲ್ಲಿ ‘ಕಾವ್ಯಾವಲೋಕನ ಮತ್ತು ಕುವಲಾಯನಂದ ಕೃತಿಗಳಲ್ಲಿ ಕಾವ್ಯ ಮೀಮಾಂಸೆಯ ಒಳನೋಟಗಳು’ ಎಂಬ ವಿಷಯದ ಪ್ರಬಂಧ ಮಂಡಿಸಿದರು.
ಭಾರತೀಯ ಕಾವ್ಯ ಮೀಮಾಂಸೆಗೆ ಪ್ರಾಚೀನ ಇತಿಹಾಸವಿದೆ. ಮೀಮಾಂಸೆಯ ಒಳನೋಟಗಳು ಇವೆ. ಭರತ, ಭಾಮಹ, ಆನಂದ ವರ್ಧನ, ದಂಡಿ, ವಾಮನ, ಕುಂತಕನಂತೆ, ಕನ್ನಡದ ಕವಿರಾಜಮಾರ್ಗ, ಪಂಪ, ನಾಗವರ್ಮ, ಕೇಶಿರಾಜ, ಜಾಯಗೌಂಡನಂತಹ ಪ್ರಾಚೀನ ಮತ್ತು ಮಧ್ಯಕಾಲೀನ ಕಾವ್ಯ ಮೀಮಾಂಸಕರು ತಮ್ಮ ಕೃತಿಗಳಲ್ಲಿ ಮೀಮಾಂಸೆಯ ವಿಭಿನ್ನ ಆಯಾಮಗಳನ್ನು ತಿಳಿಸಿದ್ದಾರೆ ಎಂದರು.
ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯ ಕವಿಗಳಿಗೆ ಶಾಸ್ತ್ರ ಕೃತಿಗಳ ರಚನೆಗೆ ಕಾವ್ಯ ಮೀಮಾಂಸೆಯ ರಸಪಾಕವಾಗಿರುತ್ತದೆ. ಶಾಸನ ಶಾಸ್ತ್ರ, ಚಂಪೂ ಕಾವ್ಯ, ವಚನ, ಸಾಂಗತ್ಯ, ಷಟ್ಪದಿ ಕಾವ್ಯ ರಚನೆ ಮಾಡಬೇಕಾದರೆ ಛಂದಸ್ಸಿನಂತೆ ಅಲಂಕಾರ ಮೀಮಾಂಸೆಯು ಪ್ರಧಾನ ಪಾತ್ರ ವಹಿಸುತ್ತದೆ ಎಂದರು.
2ನೇ ನಾಗವರ್ಮನ ಕಾವ್ಯಾವಲೋಕನ ಮೀಮಾಂಸೆಯ ಕೃತಿಯಲ್ಲಿ ತನ್ನದೇ ಆದ ಐದು ಅಧ್ಯಾಯಗಳಲ್ಲಿ ಕಾವ್ಯ ಮೀಮಾಂಸೆ ವಿಚಾರಗಳನ್ನು ಚರ್ಚಿಸಲಾಗಿದೆ. ಇದು ಕವಿಗಳಿಗೆ ಕೈಗನ್ನಡಿ ಇದ್ದಂತೆ. ಶಬ್ದ ಸ್ಮತಿ, ಕಾವ್ಯ ದೋಷ ವಿವರಣೆ, ಗುಣ ವಿವೇಚನೆ, ರಸ ಮತ್ತು ರೀತಿ ನಿರೂಪಣೆ, ಕವಿ ಸಮಯ ಎಂಬ ಪ್ರಕಾರಗಳಲ್ಲಿ ರಸ ಧ್ವನಿ ಹಾಗೂ ವಿವಿಧ ಆಲಂಕಾರಿಕ ಅಂಶಗಳನ್ನು ಬಹಳ ಭಿನ್ನವಾಗಿ ತನ್ನ ಕೃತಿಯಲ್ಲಿ ಚಿಂತಿಸಿದ್ದಾರೆ ಎಂದು ತಿಳಿಸಿದರು.
ಇವರ ಮೀಮಾಂಸೆಯ ಕೃತಿಯೊಂದಿಗೆ ಬೆಳಗಾವಿಯ ನರದಲ್ಲಿನ ಜಾಯಗೌಂಡನ ಕುವಲಾಯನಂದ ಕೃತಿಯ ವಿಶಿಷ್ಟವಾದ ಮೀಮಾಂಸೆಯ ಕೃತಿಯಾಗಿ ಕಂಡುಬರುತ್ತದೆ ಎಂದು ತಿಳಿಸಿದರು.
ಜಾಯಗೌಂಡನು ತನ್ನ ಕೃತಿಯಲ್ಲಿ ಎರಡು ರೂಪದಲ್ಲಿ ಮೀಮಾಂಸೆಯ ಒಳನೋಟಗಳನ್ನು ಚಿತ್ರಿಸಿದ್ದಾರೆ. ಕಾವ್ಯ ಭೇದ ಮೀಮಾಂಸೆ ಮತ್ತು ಅಲಂಕಾರ ಮೀಮಾಂಸೆ ಎಂಬ ನೆಲೆಯಲ್ಲಿ ಉಲ್ಲೇಖಿಸುತ್ತಾ, 119 ಅಲಂಕಾರಗಳ ಬಗ್ಗೆ ಬೇರೆ ಬೇರೆ ಅಲಂಕಾರ ವಿದ್ವಾಂಸರಿಗಿಂತ ಭಿನ್ನವಾಗಿ ಹೇಳುತ್ತಾ, ಷಟ್ಪದಿಯಲ್ಲಿ ಎಲ್ಲ ಅಲಂಕಾರಗಳಿಗೆ ಉದಾಹರಣೆಯಾಗಿ ನೀಡಿರುವುದು ಹೊಸ ಚಿಂತನೆಯಾಗಿದೆ ಎಂದು ಉದಾಹರಣೆಯೊಂದಿಗೆ ತಿಳಿಸಿದರು.
ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಮಾತನಾಡಿ, ಸಂಶೋಧನಾ ಸಿದ್ಧಪಡಿಸುವಾಗ ಮೂಲ ಆಕರಗಳ ಪರಾಮರ್ಶನ ಗ್ರಂಥಗಳ ಅವಲೋಕನ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸ್ತ್ರೀಯ ಕೃತಿಗಳಿಂದ ಕನ್ನಡದ ಸೊಬಗು ಹೆಚ್ಚಿದೆ. ಸಂಶೋಧಕರು ನಿರಂತರವಾದ ಓದು, ಅಧ್ಯಯನ ಚಿಂತನೆಯ ಮೂಲಕ ಅತ್ಯುತ್ತಮವಾದ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರು
ಮಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವರಾಮ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಶೋಕ್ ಬಾಬು ಅವರು ಪ್ರಬಂಧ ಮಂಡನೆ ಮಾಡಿದರು. ಡಾ. ಮಾಲಿನಿ ಅಭ್ಯಂಕರ್ ನಿರೂಪಿಸಿದರು.