

ಕಾರವಾರ: ಆಪ್ ಮೂಲಕ ಬೆಳೆ ಸಮೀಕ್ಷೆ ಕೈಗೊಂಡಿರುವ ಸರ್ಕಾರ ಈಗ ಅದಕ್ಕೆ ಆಧಾರ ಕಾರ್ಡ್ ಜೋಡಣೆ ಮಾಡಲು ಮುಂದಾಗಿದೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ರೈತರ ಆಧಾರ ಕಾರ್ಡ್ ಅನ್ನು ಜಮೀನಿನ ದಾಖಲೆಗಳ ಜತೆ ಅಪ್ಡೇಟ್ ಮಾಡಲು ಸರ್ಕಾರ ಸೂಚಿಸಿದೆ.
ಜಿಲ್ಲೆಯಲ್ಲಿ 5 ಲಕ್ಷ 74 ಸಾವಿರ ಕೃಷಿ ಹಿಡುವಳಿಗಳಿದ್ದು, ಶೇ. 98.17ರಷ್ಟು ಹಿಡುವಳಿಗಳ ಸಮೀಕ್ಷೆಯನ್ನು ಈಗಾಗಲೇ ರೈತರು ಹಾಗೂ ಪಿಆರ್ಗಳ ಮೂಲಕ ಕೈಗೊಳ್ಳಲಾಗಿದೆ. ಇದುವರೆಗೆ 20 ಸಾವಿರದಷ್ಟು ಹಿಡುವಳಿಗಳಿಗೆ ಆಧಾರ ಕಾರ್ಡ್ ಜೋಡಣೆ ಕಾರ್ಯ ನಡೆದಿದೆ.
ಆಪ್ ಅನ್ನು ಅಪ್ಡೇಟ್ ಮಾಡಲಾಗಿದ್ದು, ತೆರೆಯುತ್ತಿದ್ದಂತೆ ಆಧಾರ ಕಾರ್ಡ್ ಸ್ಕ್ಯಾನ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ರೈತರು ನೇರವಾಗಿಯೂ ಆಧಾರ್ ಕಾರ್ಡ್ ಅನ್ನು ಅಪ್ ಲೋಡ್ ಮಾಡಬಹುದು. ಸಾಧ್ಯವಾಗದಿದ್ದಲ್ಲಿ ಪಿಆರ್ಗಳು ಆಧಾರ ಕಾರ್ಡ್ ಮಾಹಿತಿ ಪಡೆದು ಅಪ್ಡೇಟ್ ಮಾಡುವ ಕಾರ್ಯ ಮಾಡಲಿದ್ದಾರೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ ನಾಲ್ಕು ಕಡೆ ಭತ್ತ ಖರೀದಿ ಕೇಂದ್ರ
ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಜಿಲ್ಲೆಯ ಶಿರಸಿ, ಕುಮಟಾ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಖರೀದಿ ಪ್ರಕ್ರಿಯೆ ನಡೆಯಲಿದ್ದು, ನ. 30ರಿಂದ ಡಿಸೆಂಬರ್ 30ರವರೆಗೆ ರೈತರು ಈ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.
ಸರ್ಕಾರ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 1868 ರೂ. ಬೆಲೆ ನಿಗದಿ ಮಾಡಿದ್ದು, ಗ್ರೇಡ್ ಎ ಭತ್ತಕ್ಕೆ 1888 ರೂ. ಬೆಲೆ ನಿಗದಿ ಮಾಡಿದೆ. ಪ್ರತಿ ರೈತ ಗರಿಷ್ಠ 1 ಎಕರೆಗೆ 16 ಕ್ವಿಂಟಾಲ್ ಹಾಗೂ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಈ ಯೋಜನೆಯಲ್ಲಿ ಮಾರಾಟ ಮಾಡಬಹುದಾಗಿದೆ. ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಭತ್ತದ ಸಂಗ್ರಹಣೆಗೆ ಡಿಸೆಂಬರ್ 1ರಿಂದ ಅವಕಾಶ ಕಲ್ಪಿಸಲಾಗುತ್ತದೆ. 20ರಿಂದ ನೋಂದಾಯಿತ ರೈತರಿಂದ ಭತ್ತವನ್ನು ಅಕ್ಕಿ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.
ಜಿಲ್ಲೆಯ ತೋಟಗಾರಿಕೆ ಬೆಳೆಗೆ 45 ಕೋಟಿ ವಿಮೆ ಪರಿಹಾರ
ಕಾರವಾರ: ಜಿಲ್ಲೆಯ 73650 ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಸೌಲಭ್ಯ ಈ ಸಾಲಿಗೆ ಲಭ್ಯವಾಗುತ್ತಿದ್ದು, ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸತೀಶ ಅವರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಒಟ್ಟು 15367 ಹೆಕ್ಟೇರ್ ವ್ಯಾಪ್ತಿಗೆ ಈ ಬಾರಿ ರೈತರು 9.79 ಕೋಟಿ ರೂ. ಪ್ರೀಮಿಯಂ ತುಂಬಿ ರೈತರು ಬೆಳೆ ವಿಮೆ ಮಾಡಿಸಿದ್ದರು. 45 ಕೋಟಿ 05 ಲಕ್ಷ ರೂಪಾಯಿ ಮೊತ್ತದಷ್ಟು ಬೆಳೆ ವಿಮೆ ಮಂಜೂರಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ತಾಲೂಕುವಾರು ಮಾಹಿತಿ
ಅಂಕೋಲಾದಲ್ಲಿ 1264 ರೈತರಿಗೆ, ಭಟ್ಕಳದಲ್ಲಿ 2102, ಹೊನ್ನಾವರದಲ್ಲಿ 10522, ಜೊಯಿಡಾದಲ್ಲಿ 1005, ಕುಮಟಾದಲ್ಲಿ 1794, ಮುಂಡಗೋಡಿನಲ್ಲಿ 1191, ಸಿದ್ದಾಪುರದಲ್ಲಿ 22933, ಶಿರಸಿಯಲ್ಲಿ 23845, ಯಲ್ಲಾಪುರದಲ್ಲಿ 8992 ಕೃಷಿಕರಿಗೆ ಬೆಳೆ ವಿಮೆ ಪರಿಹಾರ ಲಭ್ಯವಾಗಲಿದೆ.
ಜಿಲ್ಲೆಯ ಕುಮಟಾದ ಕೆಲವು ಗಜನಿ ಭೂಮಿಗಳನ್ನು ಬಿಟ್ಟು ಉಳಿದೆಲ್ಲ ಪ್ಲಾಟ್ಗಳ ಬೆಳೆ ಸಮೀಕ್ಷೆಯನ್ನು ಆಪ್ ಮೂಲಕ ಕೈಗೊಳ್ಳಲಾಗಿದೆ. ಈಗ ಆಧಾರ ಕಾರ್ಡ್ ಪ್ರತಿಯನ್ನು ಅಪ್ಲೋಡ್ ಮಾಡುವ ಕಾರ್ಯ ನಡೆದಿದೆ. ರೈತರು ನೇರವಾಗಿ ಅಥವಾ ತಮ್ಮ ವ್ಯಾಪ್ತಿಯ ಪಿಆರ್ಗಳಿಗೆ ಮಾಹಿತಿ ನೀಡಿದಲ್ಲಿ ಅವರು ಅಪ್ಲೋಡ್ ಮಾಡಲಿದ್ದಾರೆ. | ಹೊನ್ನಪ್ಪ ಗೋವಿಂದ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ
EndFragment