

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆಯಡಿ ಟಿಸಿ(ಟ್ರಾನ್ಸ್‌ಫಾರ್ಮರ್)ಗಳ ಮಂಜೂರು ಮಾಡಲು ಕ್ಲಾಸ್-1 ಎಲೆಕ್ಟ್ರಿಕಲ್ ಗುತ್ತಿಗೆದಾರನ ಬಳಿ 20 ಸಾವಿರ ರೂ.ಲಂಚ ಪಡೆದಿದ್ದ ಮೆಸ್ಕಾಂ ಆನವಟ್ಟಿ ವಿಭಾಗದ ಎಇಇ ಜಿ.ರಮೇಶ್ ಗುರುವಾರ ಲೋಕಾಯುಕ್ತ ಬಲಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಜಿ.ಪ್ರದೀಪ್ ಎಂಬುವರು ನೀಡಿದ ದೂರಿನ ಮೇರೆಗೆ ಮೆಸ್ಕಾಂ ಎಇಇ ರಮೇಶ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದು 20 ಸಾವಿರ ರೂ. ಸ್ವೀಕರಿಸಿದ್ದ ಜಿ.ರಮೇಶ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರಮೇಶ್ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಹಣ ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ ?
ಸೊರಬ ತಾಲೂಕಿನ ಬೆಟ್ಟದಕೊರ್ಲಿ ಗ್ರಾಮದ ಜಿ.ಪ್ರದೀಪ್ ಅವರು ಕಳೆದ ಆರು ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್-1 ಎಲೆಕ್ಟ್ರಿಕಲ್ ಗುತ್ತಿಗೆದಾರನಾಗಿದ್ದು ಸೊರಬ ತಾಲೂಕಿನ ಕೃಷಿ ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಕ್ರೀಯಾಯೋಜನೆ ಪಡೆದಿದ್ದರು. ಈ ಎಲ್ಲ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದ್ದು ಅವುಗಳಿಗೆ 25 ಕೆವಿ ಟಿಸಿ(ಟ್ರಾನ್ಸ್‌ಫಾರ್ಮರ್)ಗಳನ್ನು ಅಳವಡಿಸುವ ಕೆಲಸ ಬಾಕಿ ಇದ್ದು ಒಟ್ಟಾರೆ 7 ಟಿಸಿ ಮಂಜೂರು ಮಾಡಲು ಎಇಇ ರಮೇಶ್ ಅವರು 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ತನಿಖೆಗೊಂಡ ಲೋಕಾಯುಕ್ತ ಪೊಲೀಸರು ರಮೇಶ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲಿ 20 ಸಾವಿರ ರೂ. ಪಡೆಯುವಾಗ ಸಿಕ್ಕಿಬಿದಿದ್ದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಚ್.ಎಸ್.ಸುರೇಶ್ ಅವರು ತನಿಖೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ್ ನಾಯ್ಕ ನೇತೃತ್ವದ ಶಿವಮೊಗ್ಗ ಲೋಕಾಯುಕ್ತ ಸಿಬ್ಬಂದಿಗಳಾದ ಮಹಂತೇಶ, ಸುರೇಂದ್ರ, ಬಿ.ಟಿ.ಚನ್ನೇಶ, ಪ್ರಶಾಂತ್‌ಕುಮಾರ್, ಅರುಣ್‌ಕುಮಾರ್, ದೇವರಾಜ, ರಘುನಾಯ್ಕ, ಪುಟ್ಟಮ್ಮ, ಕೆ.ಸಿ.ಜಯಂತ, ಗಂಗಾಧರ, ವಿ.ಗೋಪಿ, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.