

ವಿಜಯಪುರ: ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಲ್ಲೊಂದಾದ ಜನತಾ ದರ್ಶನ ಸೋಮವಾರ ಯಶಸ್ವಿಯಾಗಿ ನೆರವೇರಿದ್ದು, ಸಲ್ಲಿಕೆಯಾದ ಒಟ್ಟು 651 ಸಮಸ್ಯೆಗಳ ಪೈಕಿ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಜನತಾ ದರ್ಶನ’ ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಬಂದ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿ ಪರಿಹಾರ ಕಂಡುಕೊಂಡರು.
ಮರಣ ಪತ್ರಾನುಸಾರ ಹೆಸರು ದಾಖಲು, ಜಮೀನಿನ ಸಮೀಕ್ಷೆ, ವೃದ್ಧಾಪ್ಯ ವೇತನ ಸೌಲಭ್ಯ, ಮಾಜಿ ಯೋಧರಿಗೆ ನಿವೇಶನ, ನ್ಯಾಯಬೆಲೆ ಅಂಗಡಿ ಮಂಜೂರಾತಿ, ಗೃಹಲಕ್ಷ್ಮಿಯೋಜನೆ ಸೌಲಭ್ಯ, ರಸ್ತೆ ನಿರ್ಮಾಣ, ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 651 ಅರ್ಜಿಗಳು ಸ್ವೀಕಾರಗೊಂಡವು.
ಅನುಕ್ರಮವಾಗಿ ಕಂದಾಯ ಇಲಾಖೆ 193, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ-55, ಪೊಲೀಸ್ ಇಲಾಖೆ- 31, ಪುನರ್ ವಸತಿ ಮತ್ತು ಪುನರ್ ನಿರ್ಮಾಣ (ಯಕೆಪಿ)-27, ನಗರಾಭಿವೃದ್ಧಿ ಮತ್ತು ಮಹಾನಗರ ಪಾಲಿಕೆ-113, ಹೆಸ್ಕಾಂ- 35, ಕೃಷಿ ಇಲಾಖೆ -7, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ -7, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ-21, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ -4, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-54, ಅರಣ್ಯ ಇಲಾಖೆ -3, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- 13, ಸಹಕಾರಿ ಸಂಘಗಳ ಇಲಾಖೆ -12, ನೋಂದಣಿ ಮತ್ತು ಮುದ್ರಾಂಕ ಇಲಾಖೆ-33, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ-35 ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ -8 ಅರ್ಜಿಗಳು ಸಲ್ಲಿಕೆಯಾಗಿವೆ. ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗಿದ್ದು, ಕೆಲವು ಸಮಸ್ಯೆಗಳಿಗೆ ಕಾಲಾವಕಾಶ ನೀಡಲಾಯಿತು.
ಉದ್ಘಾಟನೆ ನೆರವೇರಿಸಿದ ನಾಗಠಾಣ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಒದಗಿಸಲು ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿರಾದವರನ್ನು ಗುರುತಿಸಿ ಪರಿಹಾರ ಕಲ್ಪಿಸುವ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡಿರುವ ಕಾಂಗ್ರೆಸ್ ಸರ್ಕಾರ ರೂಪಿಸಿದ ‘ಜನತಾ ದರ್ಶನ’ ದ ಸದುಪಯೋಗವಾಗಲಿ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಮಾತನಾಡಿ, ಸಮಾಜದ ಪ್ರತಿಯೊಂದು ಪ್ರಜೆ ನೆಮ್ಮದಿಯಿಂದ ಬದುಕಲು ಸಂವಿಧಾನದ ಆಶಯದಂತೆ ಸರ್ಕಾರ ಹಲವು ಯೋಜನೆ- ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಲಾಭ ಪ್ರತಿಯೊಬ್ಬ ಕಟ್ಟೆಕಡೆಯ ವ್ಯಕ್ತಿಗೆ ದೊರಕಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮ ಮಟ್ಟದ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಕಲ್ಪಿಸಲು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಪಿ ರಿಷಿಕೇಶ ಸೋನಾವನೆ, ದೇ.ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಸಿಇಒ ರಾಹುಲ್ ಶಿಂಧೆ, ಎಎಸ್‌ಪಿ ಶಂಕರ ಮಾರಿಹಾಳ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರೆ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಸಣ್ಣಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ಮತ್ತಿತರರಿದ್ದರು.